ಭಾಗಮಂಡಲ, ಆ. 4: ಅಯ್ಯಂಗೇರಿ ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರಮದಾನದ ಮೂಲಕ ಅಕ್ಟೋಬರ್ 2ರಿಂದ ಗ್ರಾಮಸ್ಥರೇ ಕಟ್ಟಡ ನಿರ್ಮಾಣ ಮಾಡುವದಾಗಿ ಅಯ್ಯಂಗೇರಿಯಲ್ಲಿ ನಡೆದ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಸಣ್ಣಪುಲಿಕೋಟು ಹಾಗೂ ಅಯ್ಯಂಗೇರಿ ಗ್ರಾಮಸ್ಥರು ಒಮ್ಮತದಿಂದ ನಿರ್ಧರಿಸಿದರು. ಗ್ರಾಮ ಪಂಚಾಯಿತಿಯ ಗ್ರಾಮಸಭೆ ಪ್ರಾಥಮಿಕ ಶಾಲಾ ಆವರಣದಲ್ಲಿ ಅಧ್ಯಕ್ಷೆ ಇಂದಿರಾ ಅಧ್ಯಕ್ಷತೆಯಲ್ಲಿ ಜರುಗಿತು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಾಳಿಯಂಡ ಚಂಗಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲು ಅರಣ್ಯ ಇಲಾಖೆ ತಡೆ ಒಡ್ಡುತ್ತಿದ್ದು, ಪಂಚಾಯಿತಿಗೆ ಸೇರಿದ 25 ಸೆಂಟ್ ಜಾಗದ ದಾಖಲಾತಿಯು 1929ರಲ್ಲೇ ಇದೆ ಎಂದು ಪ್ರಶ್ನಿಸಿದರು. ಗ್ರಾಮ ಪಂಚಾಯಿತಿಗೆ ತನ್ನದೇ ಆದ ಜಾಗ ಇರುವದರಿಂದ ಗ್ರಾಮಸ್ಥರು ಮೊದಲ ಹಂತದ ಕೆಲಸ ಆರಂಭಿಸುವದಾಗಿ ಹೇಳಿದಾಗ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಗ್ರಾಮ ಪಂಚಾಯಿತಿಗೆ ಸೇರಿದ ಇಂಜಿನಿಯರ್ ಒಂದು ವರ್ಷದಿಂದ ಗ್ರಾಮಕ್ಕೆ ಆಗಮಿಸದೆ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡದೆ, ಹಣದ ಕೊರತೆಯಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತಿದೆ. ಗ್ರಾಮಸಭೆಗೆ ಇಂಜಿನಿಯರ್ ಬರಲೇಬೇಕೆಂದು ಇಸ್ಮಾಯಿಲ್ ಒತ್ತಾಯಿಸಿದರು. ಈ ಸಂದರ್ಭ ಗ್ರಾಮಸ್ಥರು ಸಭೆ ಬಹಿಷ್ಕರಿಸುವದಕ್ಕೆ ಮುಂದಾದಾಗ ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್, ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಗಿರೀಶ್, ಇಂಜಿನಿಯರ್ ಸಭೆ ಮುಕ್ತಾಯದೊಳಗೆ ಬರುತ್ತಾರೆ ಎಂದು ಮಾಹಿತಿ ನೀಡಿದರು. ಸಭೆ ಮುಗಿದರೂ ಇಂಜಿನಿಯರ್ ಸಭೆಗೆ ಹಾಜರಾಗಲಿಲ್ಲ. ಗ್ರಾಮಸ್ಥರು ಈ ಇಂಜಿನಿಯರ್‍ನ್ನು ವರ್ಗಾಯಿಸುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಬೆಳೆ ನಷ್ಟ ಪರಿಹಾರಕ್ಕಾಗಿ ಗ್ರಾಮಸ್ಥರು ಎರಡು ಮೂರು ಅರ್ಜಿ ನೀಡಿದರೂ, ಪರಿಹಾರ ದೊರೆತಿಲ್ಲ. ಎಪಿಎಲ್ ಪಡಿತರ ಚೀಟಿಗಿಂತ ಬಿಪಿಎಲ್ ಪಡಿತರ ಆದಾಯ ಜಾಸ್ತಿ ಬರುತ್ತಿದೆ ಎಂದು ಗ್ರಾಮಸ್ಥರು ಹೇಳಿದಾಗ ಈ ಬಗ್ಗೆ ಕಂದಾಯ ಇಲಾಖೆ ಪರಿಶೀಲನೆ ಮಾಡುವಂತೆ ಸೂಚಿಸಲಾಯಿತು. ಅಯ್ಯಂಗೇರಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಸ್ಮಶಾನಕ್ಕೆ 4 ಕಿ.ಮೀ. ದೂರ ಗುಡ್ಡಗಾಡಿನಲ್ಲಿ ಸಾಗಬೇಕಿದೆ. ಬೇರೆ ಸ್ಥಳವನ್ನು ಗುರುತಿಸಿ. ಕಸ ವಿಲೇವಾರಿಗೆ ಜಾಗ ನಿಗದಿಪಡಿಸಬೇಕಿದೆ. ಇನ್ನಿತರ ಹಲವು ಸಮಸ್ಯೆಗಳ ಕುರಿತು ಗ್ರಾಮಸಭೆಯಲ್ಲಿ ಕೇಳಿ ಬಂದಿತು. ಆಹಾರ ಇಲಾಖೆಯ ಅಧಿಕಾರಿಯು ಸಭೆಗೆ ಆಗಮಿಸದೆ ಗ್ರಾಮಸ್ಥರ ಅಹವಾಲು ತೋಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಪಿಡಿಓ ಅಶೋಕ್ ಸೇರಿದಂತೆ ವಿವಿಧ ಇಲಾಖಾಧಿಕಾರಿ ಗಳು ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.