ಮಡಿಕೇರಿ, ಆ. 4: ಮಡಿಕೇರಿ ಕೊಡವ ಸಮಾಜದಲ್ಲಿ ಇದೀಗ ಅವಧಿ ಮುಕ್ತಾಯಗೊಳ್ಳುತ್ತಿರುವ ಕೊಂಗಂಡ ಎಸ್. ದೇವಯ್ಯ ಅವರ ಅಧ್ಯಕ್ಷತೆಯ ಹಾಲಿ ಆಡಳಿತ ಮಂಡಳಿಯನ್ನೇ ಮುಂದಿನ ಮೂರು ವರ್ಷಗಳ ಅವಧಿಗೆ ಮುಂದುವರಿಸಲು ತೀರ್ಮಾನಿಸಲಾಗಿದೆ.ಕೊಡವ ಸಮಾಜದ ಸಭಾಂಗಣದಲ್ಲಿ ಇಂದು ಕೆ.ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಸುಧೀರ್ಘ ಚರ್ಚೆ ನಡೆದಿದ್ದು; ಹಾಲಿ ಆಡಳಿತ ಮಂಡಳಿ ನಡೆಸಿರುವ ಕೆಲಸ ಕಾರ್ಯಗಳು ಹಾಗೂ ಇನ್ನು ಉಳಿದಿರುವ ಹಲವು ಉದ್ದೇಶಿತ ಕಾಮಗಾರಿಗಳು ಈ ಆಡಳಿತ ಮಂಡಳಿಯ ಮೂಲಕವೇ ಮುಂದುವರಿಯಲಿ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತಗೊಂಡಿತು. ಮಹಾಸಭೆಯ ನಿರ್ಧಾರದಂತೆ ಈಗಿನ ಆಡಳಿತ ಮಂಡಳಿಯನ್ನೇ ಮುಂದಿನ ಅವಧಿಗೂ ಮುಂದುವರಿಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಆಗಸ್ಟ್ 25 ರಂದು ನಡೆಯಬೇಕಾಗಿದ್ದ ಚುನಾವಣೆ ಇದೀಗ ರದ್ದುಗೊಂಡಂತಾಗಿದೆ.ಸಭೆಯಲ್ಲಿ ಸಮಾಜದ ಅಭಿವೃದ್ಧಿ ಜನತೆಗೆ ಆಗಬೇಕಾದ ಕೆಲಸ ಕಾರ್ಯಗಳ ಕುರಿತಾಗಿ ಆರೋಗ್ಯಕರ ಚರ್ಚೆ ನಡೆಯಿತು. ಸಮಾಜದ ಅಧೀನದಲ್ಲಿ ನಡೆಯುತ್ತಿರುವ ಜನರಲ್ ತಿಮ್ಮಯ್ಯ ವಿದ್ಯಾಸಂಸ್ಥೆಯ ಮೂಲಕ ಪಿಯುಸಿ ವಿಭಾಗವನ್ನು ಪ್ರಾರಂಭಿಸುವ ಕುರಿತು ಈ ಬಗ್ಗೆ ಹೆಚ್ಚಿನ ಪ್ರಯತ್ನಕ್ಕೆ ಸಭೆ ಸಮ್ಮತಿಸಿತು. ಜನಾಂಗದ ಬಡ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ಒದಗಿಸುವದು ಮತ್ತಿತರ ಅಗತ್ಯತೆಗಳ ಬಗ್ಗೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿ ಸೂಕ್ತ ಸಲಹೆ ನೀಡಿದರು.
ಸಮಾಜದ ಮೂಲಕ ಹಿರಿಯ ಚೇತನಗಳಿಗೆ ಅನುಕೂಲವಾಗುವಂತೆ ವೃದ್ಧರ ಉಸ್ತುವಾರಿ ಕೇಂದ್ರ ಪ್ರಾರಂಭಿಸುವಂತೆ ಸಲಹೆ ನೀಡಿದ ಸದಸ್ಯ ಮಂಡೀರ ದೇವಿ ಪೂಣಚ್ಚ ಅವರು ಇದಕ್ಕೆ
(ಮೊದಲ ಪುಟದಿಂದ) ಮುಂದಾದಲ್ಲಿ ಅಗತ್ಯ ಸಹಕಾರವನ್ನು ತಾವು ನೀಡುವದಾಗಿ ಪ್ರಕಟಿಸಿದರು. ಮೈಸೂರು ರಸ್ತೆಯಲ್ಲಿ ನೂತನ ಕೇಂದ್ರ ಸ್ಥಾಪನೆ, ಹಾಲಿ ಇರುವ ಕಟ್ಟಡದ ಉಸ್ತುವಾರಿ ಸಂಬಂಧಿಸಿದಂತೆ ಸಾಲ ಪಡೆಯುವದನ್ನು ಬಿಟ್ಟು ಜನಾಂಗದ ಎಲ್ಲರ ಸಹಕಾರ ಪಡೆಯಲು ತೀರ್ಮಾನಿಸಲಾಯಿತು.
ಆಡಳಿತ ಮಂಡಳಿ
ಮಹಾಸಭೆಯ ನಿರ್ಧಾರದಂತೆ ಅಧ್ಯಕ್ಷರಾಗಿ ಕೊಂಗಂಡ ಎಸ್. ದೇವಯ್ಯ, ಉಪಾಧ್ಯಕ್ಷರಾಗಿ ಮಣವಟ್ಟಿರ ಚಿಣ್ಣಪ್ಪ, ಕಾರ್ಯದರ್ಶಿಯಾಗಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ, ಖಜಾಂಚಿಯಾಗಿ ಮಾದೇಟಿರ ಬೆಳ್ಯಪ್ಪ ಹಾಗೂ ಇತರ ನಿರ್ದೇಶಕರುಗಳು ಮುಂದುವರಿಯಲಿದ್ದಾರೆ. ಬೊಟ್ಟೋಳಂಡ ಕಾಶಿ ಅಚ್ಚಯ್ಯ ಪ್ರಾರ್ಥಿಸಿ, ಮಣವಟ್ಟಿರ ಚಿಣ್ಣಪ್ಪ ಸ್ವಾಗತಿಸಿ, ಮಾದೇಟಿರ ಬೆಳ್ಯಪ್ಪ ವಂದಿಸಿದರು.