ವೀರಾಜಪೇಟೆ, ಆ. 3: ಯವಜನರು ಸಮಾಜಕ್ಕೆ ಮಾದರಿ ಯಾಗುವ ಗುಣ ಬೆಳಸಿಕೊಳ್ಳಬೇಕು ಎಂದು ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಕೆ. ಪುರಂದರ್ ಅಭಿಪ್ರಾಯಪಟ್ಟರು.
ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋವರ್ಸ್ ಮತ್ತು ರೇಂಜರ್ಸ್ ಘಟಕದ ಕಾರ್ಯ ಚಟುವಟಿಕೆಯನ್ನು ಉದ್ಘಾಟಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯುವ ಪೀಳಿಗೆಗೆ ಮಾದರಿಯಾಗಿರ ಬೇಕು. ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜ ಸೇವೆಗೆ ಮುಂದಾಗಬೇಕು ಎಂದರು.
ಮುಖ್ಯ ಅತಿಥಿ ಕೊಡಗು ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವೆ ಮಾಡುವ ಮೂಲಕ ತಮ್ಮನ್ನು ಗುರುತಿಸಿಕೊಳ್ಳಬೇಕು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿ ಸೇವೆ ಮಾಡಿದ ರೋವರ್ಸ್‍ಗಳನ್ನು ಅಭಿನಂದಿಸುವಂತೆ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಹಾಗೂ ರೋವರ್ಸ್ ಲೀಡರ್ ವನಿತ್‍ಕುಮಾರ್ ವಾರ್ಷಿಕ ಕಾರ್ಯ ಯೋಜನೆಯ ಬಗ್ಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ಸೇವೆಯಲ್ಲಿ ತೊಡಗಿಸಿಕೊಂಡು ಸಾಧಕರಾಗಬೇಕು ಎಂದು ಹೇಳಿದರು. ರೋವರ್ ಮೆಟ್ ತಮ್ಮಯ್ಯ ಸ್ವಾಗತಿಸಿ, ರೇಂಜರ್ಸ್ ಲೀಡರ್ ರಾಖಿ ಪೂವಣ್ಣ ವಂದಿಸಿದರು.