ಮಡಿಕೇರಿ, ಆ. 3: ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಸಾಧನೆ ಮಾಡಲು ಕಾರಣಕರ್ತರಾದ ಮಕ್ಕಂದೂರು ಶಾಲಾ ಶಿಕ್ಷಕರಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಶಾಲಾ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜರಾಜೇಶ್ವರಿ ಆಸ್ಪತ್ರೆ ಮುಖ್ಯಸ್ಥ ಹಾಗೂ ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಡಾ. ನವೀನ್ ಕುಮಾರ್, ವಿದ್ಯಾರ್ಥಿಗಳು ಒಳ್ಳೆಯವರ ಸಹವಾಸ, ಸಾಧಕರ ಜೀವನ ಚರಿತ್ರೆಗಳನ್ನು ಅಭ್ಯಸಿಸುವ ಮೂಲಕ ವ್ಯಕ್ತಿತ್ವವವನ್ನು ರೂಪುಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದ.ಸಂ.ಸ.ಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕು ಎಂದರು.
ಇದೇ ಸಂದರ್ಭ ಅತಿಥಿಗಳು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ದ.ಸಂ.ಸ. ತಾಲೂಕು ಸಂಘಟನಾ ಸಂಚಾಲಕ ದೀಪಕ್, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.