ಕೂಡಿಗೆ, ಆ. 3: ಕೂಡಿಗೆ, ಕೂಡುಮಂಗಳೂರು ಮತ್ತು ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿದ್ದು, ದಿನಂಪ್ರತಿ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉತ್ತಮವಾದ ಕಟ್ಟಡವಿದ್ದರೂ ನರ್ಸ್ಗಳ ಕೊರತೆಯಿದೆ. ಕೂಡ್ಲೂರು ಗ್ರಾಮದಲ್ಲಿರುವ ಜಿಲ್ಲೆಯ ಏಕೈಕ ಕೈಗಾರಿಕಾ ಕೇಂದ್ರದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಕಾಫಿ ಘಟಕಗಳು ಮತ್ತು ಉಪ ಕೈಗಾರಿಕಾ ಕೇಂದ್ರಗಳಿದ್ದು, ದಿನಂಪ್ರತಿ ಸಾವಿರಾರು ಕಾರ್ಮಿಕರು ಕೆಲಸಕ್ಕೆ ತೆರಳುತ್ತಾರೆ. ಇವರೂ ಸಹ ಇದೇ ಆರೋಗ್ಯ ಕೇಂದ್ರವನ್ನು ಅವಲಂಭಿಸಿದ್ದಾರೆ. ಓರ್ವ ವೈದ್ಯರು ಮಾತ್ರ ಇದ್ದು, ಕೂಡಿಗೆಯಲ್ಲಿರುವ ಸೈನಿಕ ಶಾಲೆ, ಕ್ರೀಡಾ ಶಾಲೆ, ಮೊರಾರ್ಜಿ ವಸತಿ ಶಾಲೆ, ಡಯಟ್ ಕೇಂದ್ರಕ್ಕೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಕಾರ್ಯವೂ ಇದೆ. ಆದರೆ ಕೂಡಿಗೆಯಲ್ಲಿರುವ ಪ್ರಾಥಮಿಕ ಕೇಂದ್ರವು ಖಾಸಗಿ ಕ್ಲಿನಿಕ್ ಮಾದರಿಯಂತಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಟೀಕಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿ ಹೆಚ್ಚು ಗಮನ ಹರಿಸಿ ಅಭಿವೃದ್ಧಿಗೆ ಸಹಕಾರಿಗಳಾಗಬೇಕೆಂದು ಒತ್ತಾಯಿಸಿದ್ದಾರೆ.