ಪೊನ್ನಂಪೇಟೆ, ಆ. 1: ಯುವಜನರು ಸಮಾಜಕ್ಕೆ ಮಾದರಿಯಾಗುವ ಗುಣಬೆಳೆಸಿಕೊಳ್ಳಬೇಕು ಎಂದು ವೀರಾಜಪೇಟೆ ತಾಲೂಕಿನ ತಹಶೀಲ್ದಾರರಾದ ಕೆ. ಪುರಂದರ್ ಕರೆ ನೀಡಿದರು. ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋರ್ವಸ್ ಮತ್ತು ರೇಂಜರ್ಸ್ ಘಟಕದ 2019-20 ನೇ ಸಾಲಿನ ಕಾರ್ಯಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಯುವ ಪೀಳಿಗೆಗೆ ಮಾದರಿಯಾಗಿರಬೇಕು, ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜ ಸೇವೆಗೆ ಮುಂದಾಗಬೇಕು. ಆಧ್ಯಾತ್ಮಿಕ ಚಿಂತನೆಯೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು; ಸಮಾಜಕ್ಕೆ ಮಾದರಿಯಾಗಿರುವಂತೆ ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜ ಸೇವೆಗೆ ಸಿದ್ಧರಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಡಗು ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪನವರು ಮಾತನಾಡಿ ಸಮಾಜ ಸೇವೆ ಮಾಡುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿ ಸೇವೆ ಮಾಡಿದ ರೋರ್ವಸ್‍ಗಳನ್ನು ಅಭಿನಂದಿಸುವ ಜೊತೆಗೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಯುವಜನರ ಪ್ರಾತ ಏನು ಎಂಬವದರ ಬಗ್ಗೆ ತಿಳಿಸಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಉಪನ್ಯಾಸಕರು ಹಾಗೂ ರೋವರ್ ಲೀಡರ್ ವನಿತ್ ಕುಮಾರ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಿದ್ಧಾಂತ, ತತ್ವ, ಚಿಂತನೆ, ಕಾರ್ಯಯೋಜನೆ, ನಿಯಮಗಳು, ರೋವರ್ಸ್ ಮತ್ತು ರೇಂಜರ್ಸ್ ಪಾತ್ರ,ವಾರ್ಷಿಕ ಕಾರ್ಯಯೋಜನೆಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳು ಹಾಗೂ ಕೆಟ್ಟ ವ್ಯಕ್ತಿಗಳು ಇರುತ್ತಾರೆ. ಆದರೆ ಸ್ವಂತ ಅಭಿವೃದ್ಧಿಗೆ ಯೋಚನೆ ಮಾಡದೆ ಸಮಾಜಕ್ಕೆ ಕಾರ್ಯನಿರ್ವಹಿಸಿದ ಮಹನಿಯರು ಇಂದು ಹೆಸರುವಾಸಿಯಾಗಿದ್ದಾರೆ. ಬುದ್ಧ, ಅಂಬೇಡ್ಕರ್, ಗಾಂಧಿ. ಇವರನ್ನು ನಾವು ಸದಾ ಯೋಚಿಸಿಕೊಳ್ಳುತ್ತೇವೆ ಅಂತೆಯೇ ನೀವು ಸೇವೆಯಲ್ಲಿ ತೊಡಗಿಸಿಕೊಂಡು ಸಾಧಕರಾಗಬೇಕು ಎಂದು ಅಭಿಪ್ರಾಯಪಟ್ಟರು. ಸ್ವಾಗತವನ್ನು ರೋವರ್ ಮೆಟ್ ತಮ್ಮಯ್ಯ ಸ್ವಾಗತಿಸಿದರೆ, ರೇಂಜರ್ಸ್ ಲೀಡರ್ ರಾಖಿ ಪೂವಣ್ಣ ವಂದಿಸಿದರು.