ಕುಶಾಲನಗರ, ಆ. 2: ಕೆರೆಯೊಂದರಲ್ಲಿ ರ್ಯಾಫ್ಟಿಂಗ್ ಕ್ರೀಡೆ ನಡೆಸುತ್ತಿದ್ದ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು ಪ್ರವಾಸಿ ಯುವಕನೋರ್ವ ಮೃತಪಟ್ಟ ಘಟನೆ ಕುಶಾಲನಗರ ಸಮೀಪ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಯಮತ್ತೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಕಾರ್ತಿಕ್ (23) ಎಂಬಾತ ಮೃತಪಟ್ಟ ದುರ್ದೈವಿ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಬಳಿಯ ಬಿಳುಗುಂದ ಗ್ರಾಮದ ಕೆಸವಿನ ಕೆರೆಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

ತಮಿಳುನಾಡಿನಿಂದ ಪ್ರವಾಸಕ್ಕೆಂದು ಬಂದ ತಂಡ ಗುರುವಾರ ಸಂಜೆ ಕೆರೆಯಲ್ಲಿ ರ್ಯಾಫ್ಟರ್ ಮೂಲಕ ಮೋಜು ಮಸ್ತಿ ಮಾಡುತ್ತಿದ್ದ ಸಂದರ್ಭ ನೀರಿಗೆ ಬಿದ್ದು ಘಟನೆ ನಡೆದಿದೆ ಎಂದು ಮಾಹಿತಿ ನೀಡಿರುವ ಬೆಟ್ಟದಪುರ ಪೊಲೀಸರು, ಯುವಕನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿ ರ್ಯಾಫ್ಟಿಂಗ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.