ವೀರಾಜಪೇಟೆ, ಆ. 2: ಆಷಾಡ ಮಾಸದಲ್ಲಿ ಸಿಗುವಂತಹ ಆಹಾರ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯ ಕಾಪಾಡಲು ಸಹಕಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವ ಗೌಡ ಹೇಳಿದರು

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವತಿಯಿಂದ ಇಲ್ಲಿನ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಬಾಲಂಜನೇಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಪೌಷ್ಟಿಕ ಆಹಾರ ಮೇಳ ಉದ್ಘಾಟಿಸಿದ ಅವರು, ಅಡುಗೆ ಮಾಡುವದು ಒಂದು ಕಲೆ. ಬೇರೆ, ಬೇರೆ ಆಹಾರಗಳನ್ನು ತಯಾರು ಮಾಡುವದರಲ್ಲಿ ಮಹಿಳೆಯರ ಪಾತ್ರ ಮುಖ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು ಎಂದು ಮಾಹಿತಿ ನೀಡಿದರು.

ಅತಿಥಿಯಾಗಿ ಆಗಮಿಸಿದ್ದ ಬಾಲಂಜನೇಯ ದೇವಾಲಯದ ಬಾಬಾ ಶಂಕರ್ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಸದಸ್ಯೆ ರತ್ನಾ, ಮೈಪಾಲ, ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ, ಸೇವಾ ಪ್ರತಿನಿಧಿ ಪದ್ಮಾ ಇತರರು ಉಪಸ್ಥಿತರಿದ್ದರು. ಅಂಬಿಕಾ ನಿರೂಪಿಸಿ, ಜಾಜಿ ಸ್ವಾಗತಿಸಿದರು. ಈ ಸಂದರ್ಭ ಬಗೆಬಗೆಯ ಖಾದ್ಯ ತಯಾರಿಸಿದ ಸದಸ್ಯರನ್ನು ಗೌರವಿಸಲಾಯಿತು.