ಮಡಿಕೇರಿ, ಆ. 1: ಕೊಡಗು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಶ್ರೀವಿದ್ಯಾ ಅವರು ಇದೀಗ ಕರ್ನಾಟಕ ಕೆಡರ್‍ನಿಂದ ವಿಮುಕ್ತಿಗೊಂಡಿದ್ದು; ಪ್ರಸ್ತುತ ಕೇರಳ ಕೆಡರ್‍ನ ಅಧಿಕಾರಿಯಾಗಿ ನಿಯೋಜಿತರಾಗಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ ಅವರ ಕರ್ತವ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತಗೊಂಡಿತ್ತು. ಬಳಿಕ ವೈಯಕ್ತಿಕ ಕಾರಣದಿಂದ ಅವರು ಸುಧೀರ್ಘ ರಜೆಯಲ್ಲಿ ತೆರಳಿದ್ದ ಬಳಿಕ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಅನೀಸ್ ಕಣ್ಮಣಿ ಜಾಯ್ ಅವರು ನೇಮಕಗೊಂಡಿದ್ದರು. ಇದೀಗ ಶ್ರೀವಿದ್ಯಾ ಅವರು ಮುಂದಿನ ಮೂರು ವರ್ಷಗಳ ಕಾಲ ಕೇರಳ ಕೆಡರ್ ಅನ್ನು ಆಯ್ಕೆಮಾಡಿಕೊಂಡಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಶ್ರೀವಿದ್ಯಾ ಅವರು ಪ್ರಸ್ತುತ ತಮ್ಮ ತಂದೆ ಅನಾರೋಗ್ಯದಿಂದ ಬಳಲುತ್ತಿರುವದರಿಂದ ಕೋರಿಕೆಯಂತೆ ನಿಯೋಜನೆ ಮೇಲೆ ಕೇರಳಕ್ಕೆ ಮೂರು ವರ್ಷಗಳ ಕಾಲ ಬದಲಾವಣೆ ದೊರೆತಿದೆ. ಮೂರು ವರ್ಷಗಳ ಬಳಿಕ ಮತ್ತೆ ಕರ್ನಾಟಕದಲ್ಲಿ ಸೇವೆ ಮುಂದುವರಿಸುವದಾಗಿ ತಿಳಿಸಿದರು.