ಮಡಿಕೇರಿ, ಜು. 31: ಅತಿ ಹೆಚ್ಚು ಗ್ರಾಮಗಳನ್ನು ಹೊಂದಿರುವ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳಿಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆರ್.ಟಿ.ಐ. ಕಾರ್ಯಕರ್ತ ಕೆ.ಎ. ಹ್ಯಾರಿಸ್ ಟೀಕಿಸಿದ್ದು, ತಕ್ಷಣ ವೈದ್ಯರ ನೇಮಕಕ್ಕೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಪೋಕ್ಲು ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಹತ್ತು ವರ್ಷಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಆದರೆ ವೈದ್ಯರ ನೇಮಕದ ಬಗ್ಗೆ ಮಾತ್ರ ಯಾರೂ ಕಾಳಜಿ ತೋರಿಲ್ಲವೆಂದು ಆರೋಪಿಸಿದ್ದಾರೆ.