ಗೋಣಿಕೊಪ್ಪಲು, ಜು. 31: ಕೊಡಗಿನಲ್ಲಿ ವೃತ್ತ ನಿರೀಕ್ಷಕನಾಗಿ ಸೇವೆ ಸಲ್ಲಿಸುವ ಸುಯೋಗ ದೊರಕಿದ್ದು, ಕುಟ್ಟ ಪೊಲೀಸ್ ವೃತ್ತವನ್ನು ಮಾದರಿಯಾ ಗಿಸುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದ್ದು ತನ್ನೊಂದಿಗೆ ಸಹಕರಿಸುವಂತೆ ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕರಾಗಿ ಜವಾಬ್ದಾರಿ ವಹಿಸಿಕೊಂಡ ಬಿ.ಎಸ್. ಪರಶಿವಮಾರ್ತಿ ವಿನಂತಿಸಿಕೊಂಡರು.

ಕುಟ್ಟಾ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ನಾಗರಿಕ ಮತ್ತು ಪೊಲೀಸ್ ಸಂಪರ್ಕ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೊಡಗಿನ ಬಗ್ಗೆ ತಾವು ವಿಶೇಷ ಗೌರವ ಹೊಂದಿದ್ದು, ಬಾಲ್ಯದಲ್ಲಿ ಮಡಿಕೇರಿಯಲ್ಲಿ ಕೆಲವು ವರ್ಷಗಳ ಕಾಲ ವಿದ್ಯಾಬ್ಯಾಸ ಮಾಡಿದ್ದು, ಸೋಮವಾರಪೇಟೆಯಲ್ಲಿ ಈ ಹಿಂದೆ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾಗಿ ನೆನಪಿಸಿದರು.

ಕುಟ್ಟ ಕೊಡಗಿನ ಗಡಿಭಾಗ, ಕರ್ನಾಟಕದ ಹೆಬ್ಬಾಗಿಲಾಗಿದ್ದು ಇದೊಂದು ಪ್ರವಾಸಿ ಕೇಂದ್ರವೂ ಕೂಡ. ಕೊಡಗಿಗೆ ಪಕ್ಕದ ರಾಜ್ಯದ ಪ್ರವಾಸಿಗರು ಬಂದಾಗ ನಮ್ಮ ಪ್ರದೇಶದ ಬಗ್ಗೆ ಅವರಿಗೆ ಗೌರವ ಬರಬೇಕು ಎನ್ನುವ ರೀತಿಯ ಪರಿಸ್ಥಿತಿಯನ್ನು ನಿರ್ಮಿಸಬೇಕಾಗಿದೆ. ಪೊಲೀಸ್ ಮತ್ತು ಸಾರ್ವಜನಿಕ ಸಂಬಂಧ ಚೆನ್ನಾಗಿರಬೇಕು ಕಾನೂನು ಸುವ್ಯವಸ್ಥೆ ಸುಸೂತ್ರವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಸಾರ್ವಜನಿಕರ ಪರಿಚಯ ಮಾಡಿಕೊಳ್ಳಲು ಈ ಸಭೆಯನ್ನು ಏರ್ಪಡಿಸಿದ್ದು, ಯಾವದೇ ಸಮಸ್ಯೆಯನ್ನು ಕಾನೂನಿನ ಪರಧಿಯಲ್ಲಿ ಪರಿಹರಿಸಲು ಸಾಧ್ಯವಿದ್ದರೆ ತಾವು ಸಹಕರಿಸಲು ಸಿದ್ಧರಿರುವದಾಗಿ ನುಡಿದರು. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸದೆ ಪ್ರಯಾಣಿಸುವದು, ಮೂರು ನಾಲ್ಕು ಜನರು ಪ್ರಯಾಣಿಸುವದು, ಕಾರಿನ ಚಾಲಕರು ಬೆಲ್ಟ್ ಧರಿಸದೆ ವಾಹನ ಚಾಲಿಸುವದು ಕಂಡುಬಂದರೆ ತಾವು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ಕುಟ್ಟ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ ಮಾತನಾಡಿ, ಕುಟ್ಟ ಪ್ರದೇಶವು ಗಡಿಭಾಗವಾಗಿದ್ದು ಅಂತರರಾಜ್ಯ ಪೊಲೀಸ್ ಮತ್ತು ಅರಣ್ಯ ಚೆಕ್ ಪೋಸ್ಟ್ ಕೂಡಾ ಇದಾಗಿದೆ. ಆದರೆ ಇಲ್ಲಿಂದ ಮುಂದೆ ಒಂದು ಕಿ.ಮೀ. ದೂರದಲ್ಲಿದ್ದು ಹಿಂದೆ ಚೆಕ್‍ಪೋಸ್ಟ್ ಇದ್ದು ಅದನ್ನು ರದ್ದುಪಡಿಸಿ ಪೊಲೀಸ್ ಠಾಣೆ ಬಳಿಗೆ ವರ್ಗಾಯಿಸಿದ್ದು ಅದನ್ನು ಹಿಂದಿನ ಸ್ಥಳಕ್ಕೆ ವರ್ಗಾವಣೆ ಮಾಡಬೇಕು. ಇದರಿಂದ ಹಲವಾರು ಸಮಸ್ಯೆಗಳು ಬಗೆಹರಿಯಲಿದೆ. ವಿಶೇಷವಾಗಿ ಕೇರಳ ರಾಜ್ಯದಿಂದ ಗಡಿಭಾಗಕ್ಕೆ ತಂದು ಕಸ ಸುರಿಯುತಿದ್ದು, ಆ ಪ್ರದೇಶವು ಕಸಮಯ ಮತ್ತು ದುರ್ಗಂಧವಾಗಿದೆ ಎಂದರು. ಅಲ್ಲದೆ ಇದು ಗಡಿ ಪೊಲೀಸ್ ಠಾಣೆಯಾಗಿದ್ದು ನಕ್ಸಲ್ ಸೂಕ್ಷ್ಮ ಪ್ರದೇಶವೆಂದು ಗುರುತಿಸ ಲಾಗಿದ್ದರೂ ಇಲ್ಲಿ ಸಿಬ್ಬಂದಿ ಕೊರತೆ ಇದೆ ಅದನ್ನು ಸರಿಪಡಿಸಬೇಕು ಎಂದರು.

ರೈತ ಸಂಘದ ನಂಜುಂಡಸ್ವಾಮಿ ಬಣದ ಜಿಲ್ಲಾಧ್ಯಕ್ಷ ಚಿಮ್ಮಟೀರ ಗಣೇಶ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಧನು ಮಾತನಾಡಿ, ಅಂತರರಾಜ್ಯ ಪ್ರದೇಶವಾಗಿದ್ದು ಇಲ್ಲಿ ಆರ್.ಟಿ.ಓ. ಇಲಾಖೆಯ ಚೆಕ್ಕ್‍ಪೋಸ್ಟ್ ಅಗತ್ಯತೆ ಇದೆ. ಪ್ರವಾಸಿಗರಿಗೂ ಅನುಕೂಲವಾಗಲಿದ್ದು, ಸರಕಾರಕ್ಕೂ ಆದಾಯವಾಗಲಿದೆ. ಈ ಬಗ್ಗೆ ತಾವು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು. ವಿದ್ಯುತ್ ಸಂಪರ್ಕ ಕಂಬ ಮುರಿದು ಬಿದ್ದಿದ್ದು ಹಲವಾರು ಬಾರಿ ದೂರು ನೀಡಿದರೂ ಇಲಾಖೆ ಸ್ಪಂದಿಸುತಿಲ್ಲ. ಆನೆ ಕಾಡಿನಿಂದ ನಾಡಿಗೆ ಬಂದು ಮರಣ ಉಂಟಾಗಿದೆ. ಅರಣ್ಯ ಇಲಾಖೆಯು ತನ್ನ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ, ವಿದ್ಯುತ್ ಇಲಾಖೆ ಮತ್ತು ಪೊಲೀಸರ ಹಾಗೂ ಸಾರ್ವಜನಿಕರ ಜಂಟಿ ಸಭೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದರು. ಮನೆ ಕಟ್ಟಲು ಮರಳು ಸಿಗುತಿಲ್ಲ, ಮತಾಂತರ ನಡೆಯುತ್ತಿದೆ ಅದನ್ನು ನಿಗ್ರಹಿಸಿ. ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಮ್ಮ ಸಮಸ್ಯೆ ಹೇಳಿಕೊಂಡರು. ಪ್ರತಿಯೊಂದು ಸಮಸ್ಯೆಯನ್ನು ಶಾಂತವಾಗಿ ಆಲಿಸಿ ಸೂಕ್ಷ್ಮವಾಗಿ ಪರಿಹಾರದ ಬಗ್ಗೆ ಸೂಚನೆ ನೀಡುತ್ತಿದ್ದದ್ದು ಕಂಡುಬಂತು.

ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಚಿರಿಯಪಂಡ ಸಚಿನ್ ಮಾತನಾಡಿ, ಇಲ್ಲಿ ಗಾಂಜಾ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದ್ದು, ಇಲ್ಲಿನ ಯುವ ಜನತೆ ಮತ್ತು ಕಾರ್ಮಿಕರು ಗಾಂಜಾಗೆ ಬಲಿ ಬಿದ್ದಿದ್ದಾರೆ. ಅಲ್ಲದೆ ಇಲ್ಲಿ ಗೋವು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತ ಸಂಘದ ಸದಸ್ಯ ರಂಜಿ, ಗ್ರಾಮ ಪಂಚಾಯಿತಿ ಸದಸ್ಯ ವಿಜಯ, ತೈಲ ಗ್ರಾಮದ ಕರುಂಬಯ್ಯ, ಚಂದನ್ ಕಾಮತ್, ಜಲೀಲ್, ಮುಸ್ತಫಾ, ಕುಟ್ಟ ಮಸೀದಿ ಸದಸ್ಯರಾದ ರಶೀದ್, ನಾಲ್ಕೇರಿ ಗ್ರಾಮದ ಅಪ್ಪಣ್ಣ, ಟಿ. ಶೆಟ್ಟಿಗೇರಿ ಗ್ರಾಮದ ಭರತ್, ಹರಿಹರ ಗ್ರಾಮದ ಬಿದ್ದಪ್ಪ, ಹಾಗೂ ಇತರ ಸಾರ್ವಜನಿಕರು ಮತ್ತು ಕುಟ್ಟ ಪ್ರಭಾರ ಠಾಣಾಧಿಕಾರಿ ಎಎಸ್ ಐ ಮೊಹಿದ್ದೀನ್ ಉಪಸ್ಥಿತರಿದ್ದರು.