ಕುಶಾಲನಗರ, ಜು. 31: ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೆ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ನಾಯಕತ್ವ ಗುಣ, ಸಾಮಾಜಿಕ ಕಾಳಜಿ, ಸಹಬಾಳ್ವೆ, ಸಹೋದರತ್ವ, ಸೌಹಾರ್ದತೆ, ಭ್ರಾತೃತ್ವ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಸುಬ್ರಮಣ್ಯ ಯಡಪಡಿತ್ತಾಯ ಸಲಹೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರದ ಮಾನವಿಕ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಗಿಡಕ್ಕೆ ನೀರೆರೆಯುವದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,
ರಾಷ್ಟ್ರೀಯ ಸೇವಾ ಯೋಜನೆ ಎಂಬದು ಸಮುದಾಯದ ನಡುವೆ ಕಲಿಯುವ ಅನುಭದ ಶಿಕ್ಷಣವಿದ್ದಂತೆ. ವಿದ್ಯಾರ್ಥಿಗಳು ಎನ್‍ಎಸ್‍ಎಸ್‍ನಲ್ಲಿ ತೊಡಗಿಕೊಳ್ಳುವದರಿಂದ ಪರಿಪೂರ್ಣ ವ್ಯಕ್ತಿತ್ವ ವಿಕಸನದ ಜೊತೆಗೆ ಜೀವನದಲ್ಲಿ ಶಿಸ್ತು ಮತ್ತು ಸಾಮಾಜಿಕ ಸೇವಾ ಮನೋಭಾವ ಮೈಗೂಡಿಸಿಕೊಳ್ಳಲು ಸಾಧ್ಯ. ಎನ್‍ಎಸ್‍ಎಸ್‍ನ ವೇದಿಕೆಗಳು ಜಾತಿ ವಿನಾಶದಲ್ಲಿ ಪ್ರಮುಖ ಪಾತ್ರವಹಿಸಬೇಕು. ಯುವಜನತೆ ಅಥವಾ ಇನ್ನಿತರೆ ಯಾರೇ ಆಗಿರಲಿ ತಾವು ತಮ್ಮ ಜೀವನದಲ್ಲಿ ಮಾಡುವ ಸೇವೆಯನ್ನು ಪರಿಶುದ್ಧ ಮನಸ್ಸಿನಿಂದ ಪೋಷಕರ, ಗುರು ಹಿರಿಯರ ಆಶೀರ್ವಾದದಿಂದ ಪ್ರಾಮಾಣಿಕವಾಗಿ ಮಾಡುವಂತಹ ಸ್ವಚ್ಛ ಮನಸ್ಸನ್ನು ಹೊಂದಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಚಂದ್ರಶೇಖರ ಜಿ. ಜೋಷಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಎನ್‍ಎಸ್‍ಎಸ್ ಎಂಬದು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತದೆ. ವರ್ಗರಹಿತ ಸಮಾಜ ನಿರ್ಮಿಸುವಲ್ಲಿ ಹಾಗೂ ರಾಷ್ಟ್ರೀಯ ಭಾವೈಕೈತೆಯನ್ನು ಮೂಡಿಸುವಲ್ಲಿ ಸಮುದಾಯ ಸಮಾಜಗಳ ಸಮಸ್ಯೆ ಮತ್ತು ಅಗತ್ಯತೆಗಳನ್ನು ಅರಿಯುವದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭ ಪ್ರಭಾರ ನಿರ್ದೇಶಕಿ ಪ್ರೊ.ಮಂಜುಳಾ ಶಾಂತರಾಮ್, ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಂ. ಜಯಶಂಕರ್, ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಸಂಯೋಜಕರಾದ ಡಾ.ಐ.ಕೆ.ಮಂಜುಳಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ಡಾ.ಕೆ.ಎಸ್.ಚಂದ್ರಶೇಖರಯ್ಯ, ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ.ಟಿ.ಕೇಶವಮೂರ್ತಿ, ಎಸ್‍ಸಿ ಎಸ್ಟಿ ಸೆಲ್‍ನ ಸಂಯೋಜಕರಾದ ಡಾ.ರಾಜಕುಮಾರ್ ಎಸ್ ಮೇಟಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ಕೆ.ಕೆ.ಧರ್ಮಪ್ಪ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಸ್ನೇಹಾ ರಾಣಿ, ಡಾ.ಗುಣಶ್ರೀ, ಬಿ.ಎಸ್.ಶ್ರೀನಾಥ್, ಹಂಗಾಮಿ ಪ್ರಾಧ್ಯಾಪಕರಾದ ಲೋಕನಾಥ್ ರೈ, ಆಡಳಿತ ಮತ್ತು ತಾಂತ್ರಿಕ ವೃಂದ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅನ್ನಪೂರ್ಣ ಪ್ರಾರ್ಥನೆ ನೆರವೇರಿಸಿ ಉಪನ್ಯಾಸಕ ಜûಮೀರ್ ಅಹಮದ್ ನಿರೂಪಿಸಿದರು.