ಸೋಮವಾರಪೇಟೆ, ಜು. 30: ರೈತರ ಗದ್ದೆ, ತೋಟಗಳ ಪಂಪ್‍ಸೆಟ್‍ಗಳಿಗೆ ನೀಡಲಾಗಿರುವ ವಿದ್ಯುತ್ ಸಂಪರ್ಕವನ್ನು ಇಲಾಖಾ ಸಿಬ್ಬಂದಿಗಳು ಕಡಿತಗೊಳಿಸುತ್ತಿರುವದು ಖಂಡನೀಯ. ಇದನ್ನು ತಕ್ಷಣ ಕೈಬಿಡದಿದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದು ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆಗಾರರ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಲಿಂಗೇರಿ ರಾಜೇಶ್ ಅವರು, ವಿದ್ಯುತ್ ನೀರಿನ ಸಂಪರ್ಕಕ್ಕಾಗಿ ಕಲ್ಪಿಸಿರುವ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು. ಇದನ್ನು ಬಿಟ್ಟು ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲು ಮುಂದಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ಹಿಂದೆ ಇದೇ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸಿದ ಸಂದರ್ಭ ತಾತ್ಕಾಲಿಕವಾಗಿ ವಿದ್ಯುತ್ ಸ್ಥಗಿತಗೊಳಿಸುವ ಕಾರ್ಯವನ್ನು ನಿಲ್ಲಿಸಿದ್ದರು. ಈ ಬಗ್ಗೆ ಮುಖ್ಯ ಮಂತ್ರಿಗಳಿಗೂ ಮನವಿ ಸಲ್ಲಿಸಿದ್ದ ಹಿನ್ನೆಲೆ, ಅಗತ್ಯ ಕ್ರಮ ಕೈಗೊಳ್ಳುವಂತೆ ವಿದ್ಯುತ್ ಇಲಾಖೆಯ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. ಆದರೆ ಈವರೆಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ಸೂಚನೆಯ ಬಗ್ಗೆ ನಮಗೆ ಯಾವದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಕಳೆದ ಸಾಲಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ರೈತರು ಮತ್ತು ಬೆಳೆಗಾರರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದು, ಆರ್ಥಿಕವಾಗಿ ಮುಗ್ಗಟ್ಟು ಅನುಭವಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲೂ ಸಹ ಮಳೆಯ ಏರಿಳಿತದಿಂದಾಗಿ ಫಸಲು ನಷ್ಟ ಅನುಭವಿಸಬೇಕಿದೆ. ಈ ಮಧ್ಯೆ ನೀರಾವರಿಗಾಗಿ ಅಳವಡಿಸಿರುವ ಪಂಪ್‍ಸೆಟ್‍ಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್‍ನ್ನು ಸ್ಥಗಿತಗೊಳಿಸುವ ಮೂಲಕ ಬೆಳೆಗಾರರ ಮೇಲೆ ಗಧಾಪ್ರಹಾರ ಮಾಡಲಾಗುತ್ತಿದೆ ಎಂದು ರಾಜೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಇಲ್ಲಿನ ರೈತರ ಕೃಷಿ ಭೂಮಿಗೆ ಉಚಿತವಾಗಿ ವಿದ್ಯುತ್ ಒದಗಿಸಬೇಕು. ಈವರೆಗೆ ಬಾಕಿ ಉಳಿಸಿಕೊಂಡಿರುವ ಬಿಲ್‍ಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಫಿ ತೋಟವನ್ನು ನಿರ್ವಹಿಸುವದೇ ಕಷ್ಟಸಾಧ್ಯವಾಗಿದೆ. ಎಕರೆಗೆ 30 ರಿಂದ 40 ಸಾವಿರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಈ ಮಧ್ಯೆ ಪಂಪ್‍ಸೆಟ್‍ಗಳಿಗೆ ಕಲ್ಪಿಸಿರುವ ವಿದ್ಯುತ್‍ಗೆ ಸಾವಿರಾರು ರೂಪಾಯಿ ಬಿಲ್ ಕಟ್ಟುವಂತೆ ರೈತರ ಮೇಲೆ ಒತ್ತಡ ಹೇರಲಾಗುತ್ತಿದೆ. ಇಲಾಖೆಯ ಈ ಕ್ರಮ ಖಂಡನೀಯ ಎಂದರು.
ಮುಂದಿನ 1 ತಿಂಗಳೊಳಗೆ ಎಲ್ಲಾ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ತಪ್ಪಿದ್ದಲ್ಲಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳ ಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿದ್ದ ಲಕ್ಷ್ಮಣ್ ಮಾತನಾಡಿ, ವಿಯೆಟ್ನಾಂನ ಕಳಪೆ ಗುಣಮಟ್ಟದ ಕಾಳುಮೆಣಸಿನ ಆಮದು ಪ್ರಕರಣದಲ್ಲಿ ಆಮದುದಾರರಿಗೆ ದಂಡ ವಿಧಿಸಿರುವದು ಸ್ವಾಗತಾರ್ಹ. ಈ ಬಗ್ಗೆ ಹೋರಾಟ ನಡೆಸಿದವರನ್ನು ಸಂಘ ಅಭಿನಂದಿಸುತ್ತದೆ. ಮುಂದಿನ ದಿನಗಳಲ್ಲಿ ಯಾವದೇ ರೀತಿಯ ಹೋರಾಟಕ್ಕೂ ಸಂಘ ಬೆಂಬಲಿಸುತ್ತದೆ ಎಂದರು.
ಗೋಷ್ಠಿಯಲ್ಲಿ ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಗಾರರ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಪ್ರಸ್ಸಿ, ಎ.ಪಿ. ಸುಬ್ಬಯ್ಯ, ಎಸ್.ಎಂ. ಡಿಸಿಲ್ವಾ, ಗರಗಂದೂರು ಲಕ್ಷ್ಮಣ್ ಅವರುಗಳು ಉಪಸ್ಥಿತರಿದ್ದರು.