ಮಡಿಕೇರಿ, ಜು. 30: ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್ ಬಿ ಬೆಳ್ಯಪ್ಪ ಅವರನ್ನು ಆಡಳಿತ ಮಂಡಳಿ ಹಾಗೂ ಬೋಧಕವರ್ಗದಿಂದ ಬೀಳ್ಕೊಡಲಾಯಿತು. ಶನಿವಾರಸಂತೆ ಸನಿಹದ ಹಿರಿಕರ ಗ್ರಾಮದ ಹೆಚ್.ಬಿ. ಬೆಳ್ಯಪ್ಪ 1986 ರಲ್ಲಿ ಉಪನ್ಯಾಸಕರಾಗಿ ಪದಾರ್ಪಣೆ ಮಾಡಿ 33 ವರ್ಷಗಳ ಸೇವೆಯ ಬಳಿಕ ಪ್ರಾಂಶುಪಾಲರಾಗಿ ನಿವೃತ್ತರಾದರು.
ಕೊಡಗು ಜಿಲ್ಲಾ ಪ್ರಾಚಾರ್ಯರ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಭಾರತಿ ಹೈಸ್ಕೂಲ್ ಸೊಸೈಟಿಯ ಅಧ್ಯಕ್ಷ ಕಟ್ಟೆಮನೆ ಸೋನಜಿತ್, ಉಪಾಧ್ಯಕ್ಷ ಕೋಚನ ಲವಿನ್, ಕಾರ್ಯದರ್ಶಿ ಬಿ. ದುಷ್ಯಂತ್, ಹಾಲಿ ಪ್ರಾಂಶುಪಾಲ ಪಿ.ಟಿ. ಶಾಜಿ ನಿವೃತ್ತ ಪ್ರಾಂಶುಪಾಲರನ್ನು ಸನ್ಮಾನಿಸಿದರು.
ನಿರ್ದೇಶಕ ಕೋಚನ ಅನೂಪ್ ಹಾಗೂ ಪರಿಚನ ಶರತ್, ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ, ವೀಣಾ ಬೆಳ್ಯಪ್ಪ ಹಾಗೂ ಸ್ಪರ್ಶ ಉಪಸ್ಥಿತರಿದ್ದರು. ಬಿ.ಬಿ. ಪೂರ್ಣಿಮ ಸ್ವಾಗತಿಸಿ, ಬಿ.ಎಸ್. ಭಾಗ್ಯ ಭಿನ್ನವತ್ತಳೆ ವಾಚನಗೈದರು. ಕೆ.ಎಸ್. ಕೃಷ್ಣ ನಿರೂಪಿಸಿ ಎಂ.ಪಿ. ವೀಣಾ ವಂದಿಸಿದರು.