ಮಡಿಕೇರಿ, ಜು. 30: ಕಳೆದ ವರ್ಷ ಸಂಭವಿಸಿದ ಜಲಪ್ರಳಯದಲ್ಲಿ ಹಾನಿ ಮತ್ತು ಮುಳುಗಡೆಯಾದ ಗದ್ದೆಗಳಲ್ಲಿರುವ ಮರಗಳನ್ನು ಸ್ಥಳಾಂತರಿಸಿ ಆವರಿಸಿರುವ ಮರಳು ಮತ್ತು ಮಣ್ಣನ್ನು ತೆಗೆದು ಮತ್ತೆ ಫಲವತ್ತಾದ ಮಣ್ಣನ್ನು ತುಂಬಿ ರಾಸಾಯನಿಕ ಗೊಬ್ಬರವನ್ನು ಸಾಕಷ್ಟು ಹಾಕಿ ಬಿತ್ತನೆ ಮಾಡಿ ಭತ್ತದ ಬೇಸಾಯ ಮಾಡಬಹುದು ಎಂಬದು ಜಿಲ್ಲಾ ಕೃಷಿ ಇಲಾಖಾ ಜಂಟಿ ನಿರ್ದೇಶಕ ಕೆ.ರಾಜು ಹೇಳಿದ್ದಾರೆ.

ಜಲಪ್ರಳಯ ಸಂಭವಿಸಿದ ಪ್ರದೇಶಗಳಲ್ಲಿ ಮುಳುಗಡೆ ಹಾಗೂ ಹಾನಿಗೊಳಗಾದ ಪ್ರದೇಶಗಳಲ್ಲಿ ಕೇವಲ ಭತ್ತದ ಬೇಸಾಯ ಮಾತ್ರ ಸಾಧ್ಯವಾಗಿದೆ. ಈಗಾಗಲೇ ಭತ್ತದ ಸಸಿಮಡಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಯಾವದೇ ಕಾರಣಕ್ಕೆ ಪರ್ಯಾಯ ಬೆಳೆಯಾಗಲೀ ಅಥವಾ ಸಮಯವಕಾಶವಿಲ್ಲದ್ದರಿಂದ ದೀರ್ಘಾವಧಿ ಭತ್ತದ ಬೆಳೆಗಳನ್ನು ಬೆಳೆಸದೆ 110 -120 ದಿನಗಳಲ್ಲಿ ಬೆಳೆಯುವ ಅಲ್ಪಾವಧಿ ತಳಿಯ ಭತ್ತದ ಬೆಳೆಯನ್ನು ಬೆಳೆಸುವಂತೆ, ಅದರಲ್ಲೂ ಹೈಬ್ರೀಡ್ ತಳಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಬೆಳೆಯಲು ಸಲಹೆ ನೀಡಿರುವದಾಗಿ ರಾಜು ಅವರು ಹೇಳಿದರು.

ಭತ್ತ ಬೆಳೆಸಲು ಸಾಧ್ಯವಾಗದ ಪ್ರದೇಶಗಳಲ್ಲಿ ಮನಸ್ಸಿದ್ದರೆ ಸಾಧ್ಯವಾದಷ್ಟು ದ್ವಿದಳ ಧಾನ್ಯಗಳ ಬೀಜವನ್ನು ಬಿತ್ತನೆ ಮಾಡಿದರೆ ಉತ್ತಮ.

2019-2020ನೇ ಸಾಲಿಗೆ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ವಿವಿಧ ಬೆಳೆಗಳನ್ನು ಬೆಳೆಸಲಾಗಿದ್ದು, ಅವುಗಳ ಪೈಕಿ ಭತ್ತವನ್ನು ಮಳೆಯಾಶ್ರಿತ ಪ್ರದೇಶಗಳಲ್ಲಿ 28.100 ಹೆಕ್ಟೇರ್ ಗುರಿ ಹೊಂದಿದ್ದು, ಈಗಾಗಲೇ ಶೇ.50ರಷ್ಟು ಬಿತ್ತನೆ ಕಾರ್ಯ ನಡೆದಿದೆ.

ಹಾರಂಗಿ ವ್ಯಾಪ್ತಿಯಲ್ಲಿ 2000 ಹೆಕ್ಟೇರ್ ಗುರಿಯನ್ನು ಹೊಂದಲಾಗಿದೆ. ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ 400 ಹೆಕ್ಟೇರ್, ಇದೇ ವ್ಯಾಪ್ತಿಯ ನೀರಾವರಿ ಪ್ರದೇಶದಲ್ಲಿ ಒಟ್ಟು 2400 ಹೆಕ್ಟೇರ್‍ಗಳಲ್ಲಿ ಭತ್ತವನ್ನು ಬೆಳೆಸಲು ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಉತ್ತರ ಕೊಡಗಿನ ಕುಶಾಲನಗರ ವ್ಯಾಪ್ತಿಯಲ್ಲಿ ಮುಸುಕಿನ ಜೋಳವನ್ನು ಬೆಳೆಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 4 ಸಾವಿರ ಹೆಕ್ಟೇರ್‍ನಲ್ಲಿ ಬೆಳೆಸುವ ಗುರಿ ಹೊಂದಲಾಗಿದೆ. ರಾಗಿ ಮತ್ತು ತಂಬಾಕು ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗಿರುವದು ಗೋಚರಿಸಿದೆ ಎಂದರು.

ಹಿಂಗಾರು ಹಂಗಾಮಿನಂತೆ ಭತ್ತವನ್ನು 5 ಹೆಕ್ಟೇರ್, ಮುಸುಕಿನ ಜೋಳವನ್ನು 50 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸುವ ಗುರಿಯನ್ನು ಹೊಂದಲಾಗಿದೆ.

ಬೇಸಿಗೆಯಲ್ಲಿ ಭತ್ತವನ್ನು 25 ಹೆಕ್ಟೇರ್, ಮುಸುಕಿನ ಜೋಳ 50 ಹೆಕ್ಟೇರ್, ಅಲಸಂದೆಯನ್ನು 25 ಹೆಕ್ಟೇರ್, ನೆಲಕÀಡಲೆಯನ್ನು 5 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಸುವ ಗುರಿಯನ್ನು ಹೊಂದಲಾಗಿದೆ ಎಂಬ ಮಾಹಿತಿಯನ್ನು ರಾಜು ನೀಡಿದರು.

ಜಿಲ್ಲೆಯಲ್ಲಿ ಶೇ. 20 ರಷ್ಟು ಸಸಿಮಡಿ ತಯಾರಿ ಕಾರ್ಯ ಪೂರ್ಣಗೊಂಡಿರುತ್ತದೆ. ಅವುಗಳ ಪೈಕಿ ಸೋಮವಾರಪೇಟೆ ತಾಲೂಕಿನಲ್ಲಿ 5260 ಹೆಕ್ಟೇರ್, ವೀರಾಜಪೇಟೆ ತಾಲೂಕಿನಲ್ಲಿ 465 ಹೆಕ್ಟೇರ್ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ 810 ಕ್ವಿಂಟಾಲ್ ಭತ್ತದ ಬೀಜದ ವಿತರಣೆಯಾಗಿದೆ. ಇನ್ನೂ ಸ್ವಲ್ಪ ವಿತರಣೆಗೆ ಬಾಕಿಯಿದೆ ಎಂದು ತಿಳಿಸಿದರು.

ಬೆಳೆ ನಷ್ಟ

ಕೊಡಗು ಜಿಲ್ಲೆಯಲ್ಲಿ 7,109 ಹೆಕ್ಟೇರ್‍ನಷ್ಟು ಬೆಳೆ ನಷ್ಟ ಸಂಭವಿಸಿದೆ. ಒಟ್ಟು 11.448 ಮಂದಿ ರೈತರು ಕಷ್ಟದಲ್ಲಿ ಸಿಲುಕಿದ್ದಾರೆ.

ಗೊಬ್ಬರ ದಾಸ್ತಾನಿದೆ

ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರಕ್ಕೆ ಯಾವದೇ ಸಮಸ್ಯೆ ಇಲ್ಲ. ಈಗಾಗಲೇ ನಮ್ಮಲ್ಲಿ 6.450 ಮೆಟ್ರಿಕ್ ಟನ್‍ಗಳಷ್ಟು ದಾಸ್ತಾನಿದೆ. ಇನ್ನೂ ದಾಸ್ತಾನು ಬರಲಿದೆ. ಜಿಲ್ಲೆಯ ಪ್ರತಿ ಸಹಕಾರ ಸಂಘಗಳಲ್ಲಿ ಮತ್ತು ಖಾಸಗಿ ಮಳಿಗೆಗಳಲ್ಲಿ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು. -ಶ್ರೀವತ್ಸ