ಸೋಮವಾರಪೇಟೆ, ಜು.30: ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆ ಸೋಮವಾರಪೇಟೆ ಪೊಲೀಸರು ಈರ್ವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಿನ್ನೆ ದಿನ ಪಟ್ಟಣ ಠಾಣಾ ವ್ಯಾಪ್ತಿಯ ಕಾಗಡಿಕಟ್ಟೆ ಜಂಕ್ಷನ್‍ನಲ್ಲಿ ಹೈವೆ ಪ್ಯಾಟ್ರೋಲಿಂಗ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‍ಐ ಗೋವಿಂದ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇರೆ ಹಣಕೋಡು ಗ್ರಾಮದ ಸುರೇಶ ಮತ್ತು ಸುಬ್ರಮಣಿ ಅವರುಗಳನ್ನು ಪೊಲೀಸರು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಕಾಗಡಿಕಟ್ಟೆ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭ ಕಾರಿನಲ್ಲಿ ಆಗಮಿಸಿದ ಈರ್ವರು, ‘ಇಲ್ಲಿ ಯಾಕೆ ತಪಾಸಣೆ ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದು, ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಈರ್ವರನ್ನು ವಶಕ್ಕೆ ಪಡೆದಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿ, ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಂಡ ಸಂಹಿತೆ 353 ಮತ್ತು 504 ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಧೀಶರ ಎದುರು ಹಾಜರು ಪಡಿಸಿದ ಮೇರೆ, ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.