ವೀರಾಜಪೇಟೆ, ಜು. 30: ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲಿ ಸಾರ್ವಜನಿಕರು ಯಾವ ರೀತಿ ಆತಂಕದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಆಂಧ್ರ್ರಪ್ರದೇಶದ ಎನ್‍ಡಿಆರ್ ಎಫ್ ತಂಡ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಇಂದು ಅಣಕು ಪ್ರದರ್ಶನ ಮೂಲಕ ಮಾಹಿತಿ ನೀಡಿತು.
ಎನ್‍ಡಿಆರ್‍ಎಫ್ ಅಧಿಕಾರಿ ದೊಡ್ಡಬಸಪ್ಪ ಮಾತನಾಡಿ ವಿಕೋಪದಲ್ಲಿ ಎರಡು ವಿಧಗಳಿವೆ. ಒಂದು ಪ್ರಾಕೃತಿಕ ಮತ್ತೊಂದು ಮಾನವ ನಿರ್ಮಿತವಾಗಿವೆ. ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಮಾನವರ ಪ್ರಾಣ ಉಳಿಸುವ ಕೆಲಸ ಮಾತ್ರ ನಮ್ಮದಾಗಿರುತ್ತದೆ. ಹಲವಾರು ವರ್ಷಗಳ ಹಿಂದೆ ಗುಜರಾತ್ ಕಚ್‍ನಲ್ಲಿ ಸಂಭವಿಸಿದ ಭೀಕರ ಅನಾಹುತದಿಂದ; ಅರೆಸೇನೆಯ ವಿವಿಧ ತಂಡಗಳಿಂದ ಆಯ್ಕೆ ಪ್ರಕ್ರಿಯೆ ನಡೆದು ದೇಶದಲ್ಲಿ ಒಟ್ಟು 15 ಸಾವಿರ ಜನರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭೂಕಂಪ, ಪ್ರವಾಹಗಳು ಪ್ರಾಕೃತಿಕ ವಿಕೋಪಗಳಾಗಿವೆ. ಮಾನವ ನಿರ್ಮಿತ ಎಂದರೆ ದೊಡ್ಡದೊಡ್ಡ ಕಟ್ಟಡಗಳು ಸೇತುವೆಗಳು ಕುಸಿದು ಬೀಳುವದು ಮಾನವ ನಿರ್ಮಿತ ವಿಕೋಪಗಳಾಗಿದೆ. ವಿಕೋಪಗಳು ನಡೆದಂತಹ ಸಂದರ್ಭದಲ್ಲಿ ನಮಗೆ ಕರೆ ಮಾಡಿದರೆ ನಾವು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎನ್‍ಡಿಆರ್‍ಎಫ್ ಅಧಿಕಾರಿ ಉದಿತ್ ಕುಮಾರ್ ದೀಕ್ಷಿತ್, ತಹಶೀಲ್ದಾರ್ ಪಿ ಪುರಂದರ, ಕಂದಾಯ ಅಧಿಕಾರಿ ಪಳಂಗಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಅಭಿಯಂತರ ಹೇಮ್‍ಕುಮಾರ್ ಉಪಸ್ಥಿತರಿದ್ದರು.