ಶನಿವಾರಸಂತೆ, ಜು. 28: ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಸಂತೆ ಮಾರುಕಟ್ಟೆ, ಗುಂಡೂರಾವ್ ಬಡಾವಣೆ, ತ್ಯಾಗರಾಜ ಕಾಲೋನಿಯ ರಸ್ತೆಯಲ್ಲಿ ಬೀದಿ ದೀಪಗಳೇ ಉರಿಯು ತ್ತಿಲ್ಲ. ಪೈಪ್‍ಲೈನ್ ಅಳವಡಿಸದ ಕಾರಣ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಫಲಾನುಭವಿಗಳಿಗೆ ಆಶ್ರಯ ಮನೆಗಳ ಹಂಚಿಕೆಯಾಗಲಿಲ್ಲ. ಹಸಿಮೀನು ಮಾರುಕಟ್ಟೆ ಹರಾಜು ಪ್ರಕ್ರಿಯೆ ನಡೆದಿಲ್ಲ ಎಂಬಿತ್ಯಾದಿ ವಿಚಾರಗಳ ಕುರಿತು ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆ ಆರಂಭದಲ್ಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ಹಿನ್ನಡೆ ಕಂಡಿರುವ ಬಗ್ಗೆ ಚರ್ಚೆ, ಮಾತಿನ ಚಕಮಕಿ ನಡೆಯಿತು. ಯಾವದೇ ವಿಚಾರದಲ್ಲೂ ಪಂಚಾ ಯಿತಿ ಅಧ್ಯಕ್ಷರು ಶೀಘ್ರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಪಂಚಾಯಿತಿ ಆದಾಯ ಪೋಲಾಗುತ್ತಿದೆ ಎಂದು ಸದಸ್ಯರಾದ ಆದಿತ್ಯ ಗೌಡ, ಹೆಚ್.ಆರ್. ಹರೀಶ್‍ಕುಮಾರ್, ಸರ್ದಾರ್ ಅಹಮ್ಮದ್ ಹಾಗೂ ಎಸ್.ಎನ್. ಪಾಂಡು ಆರೋಪಿಸಿದರು.
ಐದು ವರ್ಷಗಳ ಅವಧಿಯಲ್ಲಿ ಆರು ಅಭಿವೃದ್ಧಿ ಅಧಿಕಾರಿಗಳನ್ನು ಕಂಡ ಪಂಚಾಯಿತಿ ಇದೀಗ ನೂತನವಾಗಿ ಅಧಿಕಾರ ವಹಿಸಿ ಕೊಂಡಿರುವ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರೈ ಅವರಿಂದಲಾದರೂ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ನಡೆಯಲಿ ಎಂಬ ಆಶಯವನ್ನು ಸದಸ್ಯರು ವ್ಯಕ್ತಪಡಿಸಿದರು.
ಸ್ಪಂದಿಸಿದ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ಕಾರ್ಮಿಕರ ಕೊರತೆಯಿಂದ ವಿದ್ಯುತ್ ದೀಪಗಳ ಅಳವಡಿಕೆ ವಿಳಂಬವಾಗುತ್ತಿದೆ. ಶೀಘ್ರದಲ್ಲೇ ಸ್ವಾಗತ ಫಲಕ ಅಳವಡಿಕೆ, ಸಂತೆ ಮಾರುಕಟ್ಟೆ, ಶೌಚಾಲಯಗಳ ಸ್ವಚ್ಛತೆ, ವಿವಿಧ ಭಾಗಗಳಲ್ಲಿ ರಸ್ತೆ ಹಾಗೂ ಚರಂಡಿಗಳ ದುರಸ್ತಿ, ಹಸಿಮೀನು ಮಾರುಕಟ್ಟೆ ಹರಾಜು ಪ್ರಕ್ರಿಯೆ ನಡೆಸಲಾಗುವದು ಎಂದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ಹಾಗೂ ಸದಸ್ಯರು ಸಭೆಗೆ ಆಗಮಿಸಿ ತಮ್ಮ ಸಂಘದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಸುವ ಸಲುವಾಗಿ ಸಂಘದ ಕಚೇರಿ ಮುಂಭಾಗದ ಪ್ಯಾಸೇಜ್‍ಅನ್ನು ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆದು ಸದಸ್ಯರ ಸಮ್ಮತಿಯೊಂದಿಗೆ ಅಧ್ಯಕ್ಷರು, ಪ್ಯಾಸೇಜ್‍ಅನ್ನು 2 ಅಡಿಗಳಷ್ಟು ಜಾಗ ಬಿಟ್ಟು ಯಥಾಸ್ಥಿತಿಯಲ್ಲೇ ಕಾಪಾಡಿ ಕೊಳ್ಳುವಂತೆ ಸೈನಿಕರ ಸಂಘಕ್ಕೆ ಅನುಮತಿ ನೀಡಿದರು. ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿ ಗಳನ್ನು ಪರಿಶೀಲಿಸಿ ಚರ್ಚಿಸ ಲಾಯಿತು. ಪುರಾತನ ಮಕ್ಕಳ ಕಟ್ಟೆ ಕೆರೆಗೆ ಪುನಶ್ಚೇತನ, ವಿಶೇಷ ವರ್ಗದವರಿಗೆ ವಸತಿ ಸೌಲಭ್ಯ, ಸಂತೆ ಮಾರುಕಟ್ಟೆ ಮಳಿಗೆಗಳ ಹರಾಜು, ಪ್ರವಾಸಿ ಮಂದಿರದ ಮುಂಭಾಗದ ಬೈಪಾಸ್ ರಸ್ತೆ, ಕಾನ್ವೆಂಟ್ ರಸ್ತೆ, ಕಾವೇರಿ ಕಾಲೇಜು ಮುಂಭಾಗದ ರಸ್ತೆಗಳು ಹಾಗೂ ಚರಂಡಿಗಳ ದುರಸ್ತಿ ಇತ್ಯಾದಿಗಳ ಬಗ್ಗೆ ಸರ್ವಾನು ಮತದಿಂದ ತೀರ್ಮಾನಿಸಲಾಯಿತು.
ಡೆಂಗ್ಯೂ ಹಾಗೂ ಚಿಕನ್‍ಗುನ್ಯ ರೋಗಗಳು ಹರಡದಂತೆ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಶಾಲಾ-ಕಾಲೇಜು, ಥಿಯೇಟರ್‍ಗಳಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರೈ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಈಗಾಗಲೇ ನಿತ್ಯ ಚರಂಡಿ ಸ್ವಚ್ಛತೆ ಕಾರ್ಯ ನಡೆದಿದೆ. ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವದು ಎಂದರು.
ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಸೌಭಾಗ್ಯ, ಉಷಾ ಜಯೇಶ್, ಹೇಮಾವತಿ, ರಜನಿ, ಆದಿತ್ಯ ಗೌಡ, ಹೆಚ್.ಆರ್. ಹರೀಶ್‍ಕುಮಾರ್, ಸರ್ದಾರ್ ಅಹಮ್ಮದ್, ಎಸ್.ಎನ್. ಪಾಂಡು, ಕಾರ್ಯದರ್ಶಿ ತಮ್ಮಯ್ಯಾಚಾರ್, ಸಿಬ್ಬಂದಿ ವಸಂತ್, ಫೌಜಿಯಾ, ಧರ್ಮ ಇತರರು ಉಪಸ್ಥಿತರಿದ್ದರು.