ಮಡಿಕೇರಿ, ಜು. 29: ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಮಾರ್ಗದ ವಿರುದ್ಧ ಜಿಲ್ಲೆಯ ಜನತೆ ಒಗ್ಗಟ್ಟಾಗಿ ಧ್ವನಿ ಎತ್ತಬೇಕೆಂದು ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ, ಹೆದ್ದಾರಿ ನಿರ್ಮಾಣದಿಂದ ಕೊಡಗಿನ ಅಭಿವೃದ್ಧಿ ಸಾಧ್ಯ ಎಂದು ಪ್ರತಿಬಿಂಬಿಸಲಾಗುತ್ತಿದೆ, ಆದರೆ ಈ ಬೃಹತ್ ಯೋಜನೆಯಿಂದ ಕೊಡಗು ನಾಶವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆಯ ಮೂಲಕ 7 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಪ್ರಸ್ತಾಪವಿದ್ದು, ಈ ಪೈಕಿ ಈಗಾಗಲೇ ಬಂಟ್ವಾಳ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರವಾಸಿಗರ ಆಗಮನದಿಂದ ಜಿಲ್ಲೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇವುಗಳ ವಿಲೇವಾರಿಗೆ ವೈಜ್ಞಾನಿಕ ಘಟಕಗಳನ್ನು ಸ್ಥಾಪಿಸಲಿ ಎಂದು ಒತ್ತಾಯಿಸಿದರು.
ವೈಲ್ಡ್ ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲುಮಾರ್ಗ ಯೋಜನೆಯ ವಿರುದ್ಧ ಈಗಾಗಲೆ ನ್ಯಾಯಾಲಯದ ಮೊರೆ ಹೋಗಲಾಗಿದ್ದು, ಆಗಸ್ಟ್ 20 ರಂದು ವಿಚಾರಣೆÉ ನಡೆಯಲಿದೆ. ಕೋಟ್ಯಂತರ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಕಾವೇರಿ ಹುಟ್ಟುವ ಕೊಡಗು ಜಿಲ್ಲೆಯ ನಾಶಕ್ಕೆ 30 ಸಾವಿರ ಕೋಟಿ ರೂ.ಗಳ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಆರೋಪಿಸಿದÀರು.
ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಕೊಡಗಿನ ಪರಿಸರಕ್ಕೆ ಚತುಷ್ಪಥ ರಸ್ತೆಯ ಅಗತ್ಯವಿಲ್ಲ. ದ್ವಿಪಥ ರಸ್ತೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲವೆಂದು ಸ್ಪÀಷ್ಟಪಡಿಸಿದರು. ಪ್ರವಾಸಿಗರನ್ನು ಆಕರ್ಷಿಸಲು ಹೆದ್ದಾರಿಯೇ ಬೇಕಿಲ್ಲವೆಂದರು. ಈಗಾಗಲೆ 6 ಲಕ್ಷ ಜನಸಂಖ್ಯೆಯ ಸಣ್ಣ ಜಿಲ್ಲೆ ಕೊಡಗಿಗೆ ವಾರ್ಷಿಕ 18 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುವ ಅನಿವಾರ್ಯತೆ ಇಲ್ಲವೆಂದು ಅವರು ಅಭಿಪ್ರಾಯಪಟ್ಟರು.
ಮುಕ್ಕೋಡ್ಲು ಗ್ರಾಮದ ಸಂತ್ರಸ್ತ ತಂಬುಕುತ್ತೀರ ಪೂವಯ್ಯ ಮಾತನಾಡಿ, ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದರೂ ಇಲ್ಲಿಯವರೆಗೆ ಸೂಕ್ತ ಪರಿಹಾರ ದೊರೆತ್ತಿಲ್ಲ. ಈ ರೀತಿಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಬದಲು ಕೊಡಗಿಗೆ ಮಾರಕ ವಾಗುವಂತಹ ಯೋಜನೆಗಳಿಗೆ ಆತುರ ಪಡುತ್ತಿರುವದು ಸರಿಯಲ್ಲವೆಂದರು.
ಗೋಣಿಕೊಪ್ಪದ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಎಸ್. ಶರತ್‍ಕಾಂತ್ ಮಾತನಾಡಿ, ಮುಂದಿನ ಪೀಳಿಗೆಗೆ ಸುಂದರ ಪರಿಸರದ ಈ ಕೊಡಗನ್ನು ಉಳಿಸಿಕೊಳ್ಳ ಬೇಕಾಗಿದೆ. ಮಾರಕ ವಾಗುವ ಯೋಜನೆಗಳನ್ನು ವಿರೋಧಿಸುವದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋದೂರು ಶಿವಶಂಕರ್ ಉಪಸ್ಥಿತರಿದ್ದರು.