ಸುಂಟಿಕೊಪ್ಪ, ಜು. 28: ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾ ಸಮಾಜದ ಅಭಿವೃದ್ಧಿಗೆ ಸಾಮಾಜಿಕ ಸೇವೆಯಲ್ಲಿ ಲಯನ್ಸ್ ಸದಸ್ಯರುಗಳು ಕೈ ಜೋಡಿಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಬೇಕೆಂದು ಲಯನ್ಸ್ ಮಾಜಿ ಗವರ್ನರ್ ಡಾ. ಕೃಪಾ ಅಮರ್ ಅವರು ಕರೆ ನೀಡಿದರು.
ಸುಂಟಿಕೊಪ್ಪದ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಲಯನ್ಸ್ ಕ್ಲಬ್‍ನ 2019-20ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕ್ಲಬಿನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಗ್ಲೆನ್ ನಿಶಾಂತ್ ಮೆನೆಜಸ್, ಕಾರ್ಯದರ್ಶಿ ಎಸ್.ಎಸ್. ಶಶಾಂಕ್, ಖಜಾಂಚಿ ಸಿ.ವಿ.ನಿಕೇಶ್ ಹಾಗೂ ನೂತನವಾಗಿ ಸೇರ್ಪಡೆಗೊಂಡಿರುವ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು.
ನೂತನ ಅಧ್ಯಕ್ಷರಾದ ಗ್ಲೆನ್ ನಿಶಾಂತ್ ಮೆನೆಜಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿಯೋಜಿತ ಅಧ್ಯಕ್ಷ ಹೆಚ್.ಬಿ. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಲಯನ್ಸ್‍ನ ಕಾರ್ಯಾಧ್ಯಕ್ಷ ಕೆ.ಕೆ.ದಾಮೋಧರ್, ಶೇಖರ್, ಶಾಶ್ವತ್ ಬೋಪಣ್ಣ ಉಪಸ್ಥಿತರಿದ್ದರು.
ವಿಜಯಲಕ್ಷ್ಮೀ ಶ್ರೀನಿವಾಸ್ ಪ್ರಾರ್ಥಿಸಿ, ಅಧ್ಯಕ್ಷ ಹೆಚ್.ಬಿ.ಗಣೇಶ್ ಸ್ವಾಗತಿಸಿ, ಗ್ಲೆನ್ ಮೆನೆಜೆಸ್ ವರದಿ ವಾಚಿಸಿ, ಕಾರ್ಯದರ್ಶಿ ಎಸ್.ಎಸ್.ಶಶಾಂಕ್ ವಂದಿಸಿದರು.