ನಾಪೆÇೀಕ್ಲು, ಜು. 28: ಬೆಂಗಳೂರಿನ ಸಮರ್ಥ ಭಾರತ ಸಂಸ್ಥೆಯಿಂದ ಕರ್ನಾಟಕದಲ್ಲಿ ಕೋಟಿ ವೃಕ್ಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಯೋಜಕ ಎಂ.ಜಿ. ಪ್ರೇಮಾನಂದ ಹೇಳಿದರು.

ಸಮರ್ಥ ಭಾರತ, ವೀರಾಜ ಪೇಟೆ, ಮಡಿಕೇರಿ ಸಾವಯವ ಕೃಷಿ ಸಹಕಾರ ಸಂಘ, ವೀರಾಜಪೇಟೆ ಫ್ಲೇವರ್ಸ್ ಫುಡ್ ಕ್ಲಸ್ಟರ್ ಮತ್ತು ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಲಾದ ಬೀಜದ ಚೆಂಡು ತಯಾರಿಕಾ ಪ್ರಾತ್ಯಕ್ಷತಾ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಈ ವರ್ಷ ರಾಜ್ಯದಲ್ಲಿ ಕೋಟಿ ವೃಕ್ಷ ಅಭಿಯಾನದಡಿಯಲ್ಲಿ 5 ಕೋಟಿ ಬೀಜದ ಚೆಂಡು ತಯಾರಿಸಿ ವಿವಿಧೆಡೆ ಬಿತ್ತನೆ ಮಾಡಲಾಗುವದು ಎಂದರು.

ಕೊಡಗು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಾಗು, ಹೊಳೆಮತ್ತಿ, ಹೊಂಗೆ, ಬಿದಿರು, ಹಲಸು, ಆಲ, ಅರಳಿ, ಜಾಲಿ, ಹೆಬ್ಬೇವು, ಕಾಡು ಹೊಂಗೆ ಮರಗಳ ಬೀಜ ಚೆಂಡುಗಳನ್ನು ತಯಾರಿಸ ಲಾಗಿದ್ದು, ಏಳು ದಿನಗಳ ನಂತರ ಇದನ್ನು ಬಿತ್ತನೆ ಮಾಡಲಾಗುವದು ಎಂದರು.

ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ ಮಾತನಾಡಿ ಹೆತ್ತ ತಾಯಿಯ ನಂತರ ಪ್ರಕೃತಿ ನಮ್ಮ ದೇವರು.

ಪ್ರಕೃತಿಯನ್ನು ರಕ್ಷಿಸುವದು ಮತ್ತು ಬೆಳೆಸುವದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಬೀಜದ ಚೆಂಡು ತಯಾರಿಸುವ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಾವಯವ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಲ್ಟಿಕಾರಂಡ ಮುದ್ದಣ್ಣ ಮಾತನಾಡಿ, ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ದೊರೆಯಬೇಕಾದರೆ ಹಸಿರು ಪರಿಸರ ನಿರ್ಮಾಣವಾಗಬೇಕು. ಶುದ್ಧ ಗಾಳಿ, ಶುದ್ಧ ನೀರು, ಜೀವ ಸಂಕುಲಕ್ಕೆ ವರದಾನ ಇದು ಪರಿಸರ ರಕ್ಷಣೆಯಿಂದ ಮಾತ್ರ ಇದು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಫುಡ್ ಕ್ಲಸ್ಟರ್‍ನ ಅಧ್ಯಕ್ಷೆ ಕೇಟೋಳಿರ ಫ್ಯಾನ್ಸಿ ಗಣಪತಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅನಿಲ್ ರಾಜ್, ಆಂಗ್ಲಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ, ಶಿಕ್ಷಕ ವೃಂದದವರು ಇದ್ದರು.