ಗೋಣಿಕೊಪ್ಪ, ಜು. 29: ಕಳೆದ ಹಲವು ತಿಂಗಳುಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಫೋಟೋ ಮತ್ತು ಹೆಸರು ಬಳಸಿರುವ ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯ ಸಂಪಾದಕ ಹಾಗೂ ವರದಿಗಾರನ ಮೇಲೆ ಫೋಕ್ಸೊ ಕಾಯ್ದೆಯಡಿ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ಸಮೀಪದ ಖಾಸಗಿ ತೋಟವೊಂದರ ಕಾರ್ಮಿಕ ದಂಪತಿಗಳ ಅಪ್ರಾಪ್ತ ವಯಸ್ಸಿನ ಪುತ್ರಿಯನ್ನು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಅಪಹರಿಸಿ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಫೋಟೋ ಮತ್ತು ಹೆಸರು ಬಳಸಿ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ವರದಿ ಮಾಡಿರುವ ಸಿದ್ದಾಪುರದ ವಸಂತ ಎಂಬವರ ವಿರುದ್ಧ ವಿದ್ಯಾರ್ಥಿನಿಯ ಸಹೋದರ ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಹಾಗೂ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ನೀಡಿರುವ ದೂರಿನ ಅನ್ವಯ ಗೋಣಿಕೊಪ್ಪಲು ಪೊಲೀಸರು ಪತ್ರಿಕೆಯ ಸಂಪಾದಕ ಹಾಗೂ ವರದಿಗಾರನ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಖಚಿತಪಡಿಸಿದ್ದಾರೆ.