ಸಿದ್ದಾಪುರ, ಜು. 28: ಸುಂಟಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಗುಡ್ಡೆಹೊಸೂರು ಐಚೆಟ್ಟಿರ ನರೇನ್ ಸೋಮಯ್ಯ ಸ್ಪೋಟ್ಸ್ ಸೆಂಟರ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನವನ್ನು ಕೊಡಗು ಪ್ರೆಸ್‍ಕ್ಲಬ್ ತಂಡ ಪಡೆದು ಕೊಂಡಿದೆ. ಟೆನ್ನಿಸ್ ಬಾಲ್ ಲೀಗ್ ಪಂದ್ಯದಲ್ಲಿ ಹಳೆಯ ವಿದ್ಯಾರ್ಥಿಗಳ ಎ ಮತ್ತು ಬಿ ತಂಡದ ಜತೆ ಕೊಡಗು ಪ್ರೆಸ್‍ಕ್ಲಬ್ ಮತ್ತು ಕಂದಾಯ ಇಲಾಖೆ ತಂಡಗಳೂ ಭಾಗವಹಿಸಿದ್ದವು.

ಕೊಡಗು ಪ್ರೆಸ್ ಕ್ಲಬ್ ತಂಡವು ಲೀಗ್ ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಫೈನಲ್ ಹಂತ ಪ್ರವೇಶಿಸಿತು. ಕಂದಾಯ ಇಲಾಖೆ ಹಾಗೂ ಕೊಡಗು ಪ್ರೆಸ್‍ಕ್ಲಬ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಕಂದಾಯ ಇಲಾಖೆ ತಂಡವು ನಿಗದಿತ 6 ಓವರುಗಳಿಗೆ 5 ವಿಕೆಟ್ ಕಳೆದು ಕೊಂಡು 38 ರನ್ ಗಳಿಸಿತ್ತು. ಪ್ರೆಸ್ ಕ್ಲಬ್ ತಂಡದ ಪರವಾಗಿ ಮುಸ್ತಫಾ 2, ಮಂಜು 1, ಇಸ್ಮಾಯಿಲ್ 2 ವಿಕೆಟ್ ಪಡೆದುಕೊಂಡರು. 39 ರನ್ ಗುರಿಯೊಂದಿಗೆ ಆಡಿದ ಕೊಡಗು ಪ್ರೆಸ್ ಕ್ಲಬ್ ತಂಡವು 4.3 ಎಸೆತಗಳಲ್ಲಿ 3ವಿಕೆಟ್ ಒಪ್ಪಿಸಿ ವಿಜಯದ ಗುರಿ ಸಾಧಿಸಿತು. ಪ್ರೆಸ್ ಕ್ಲಬ್ ತಂಡದ ಪರವಾಗಿ ಹೇಮಂತ್ 16 ರನ್, ಸುವರ್ಣ ಮಂಜು 10 (ಅಜೇಯ), ಶಿವರಾಜು 4 ಮತ್ತು ಉದಯ (ಅಜೇಯ) 6 ರನ್ ಗಳಿಸಿದರು.