ಶ್ರೀಮಂಗಲ, ಜು. 29: ಕೊಡಗು ಜಿಲ್ಲೆಯ ಬೆಳೆಗಾರರು ಕಳೆದ ಎರಡು ದಶಕದಿಂದ ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚ ಹೆಚ್ಚಳದಿಂದ ತೀವ್ರ ಸಂಕಷ್ಟದಲ್ಲಿದ್ದು, ಕಾಫಿ ಬೆಳೆಗಾರರ ಸಾಲÀ ಮತ್ತು ಬಡ್ಡಿ ಮನ್ನಾ ಅಗತ್ಯತೆ ಇಲ್ಲ ಎನ್ನುವ ಕಾಫಿ ಮಂಡಳಿಯ ಸದಸ್ಯರುಗಳ ಹೇಳಿಕೆ ಸರಿಯಲ್ಲ. ಬೆಳೆಗಾರರ ಒಕ್ಕೂಟದ ನಿಯೋಗವು ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮಾತ್ರ ಮನ್ನಾ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವದು ದೊಡ್ಡ ಬೆಳೆಗಾರರಿಗೆ ಪ್ರಯೋಜನವಾಗಲಿ ದೆಯೇ ಹೊರತು ಸಣ್ಣ ಬೆಳೆಗಾರರ ಸಾಲ ಮತ್ತು ಬಡ್ಡಿ ಸಂಪೂರ್ಣ ಮನ್ನಾ ಮಾಡಬೇಕು ಎಂದು ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಒತ್ತಾಯಿಸಲಾಯಿತು.
ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತಮ್ಮು ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕೊಡಗು ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಕಾಫಿ ಬೆಳೆಗಾರರ ಸಾಲ ಮತ್ತು ಬಡ್ಡಿ ಮನ್ನಾ ಅಗತ್ಯ ಇಲ್ಲ ಎಂಬ ಹೇಳಿಕೆಯು ಬೆಳೆಗಾರರ ಸಂಕಷ್ಟ ಅರಿವಿಲ್ಲದೆ ನೀಡಿದಂತಿದೆ. ಎಂದು ಸಭೆಯಲ್ಲಿ ಕಿಡಿಕಾರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಮ್ಮು ಮುತ್ತಣ್ಣ ಅವರು ಮಾತನಾಡಿ, ಮಡಿಕೇರಿಯಿಂದ ಸಿದ್ದಾಪುರ, ಅಮ್ಮತ್ತಿ, ಗೋಣಿಕೊಪ್ಪ, ಪೊನ್ನಂಪೇಟೆ, ಶ್ರೀಮಂಗಲ ಮೂಲಕ ಕೇರಳಕ್ಕೆ ಚತುಷ್ಪಥ ಹೆದ್ದಾರಿ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಇಲಾಖೆ ಸಾರ್ವಜನಿಕ ಪ್ರಕಟಣೆ ನೀಡಿದ್ದು, ಇದರಲ್ಲಿ 260 ಅಡಿ ಅಗಲದ ಹೆದ್ದಾರಿ ಮಾಡಲು ಜಾಗ ಸ್ವಾಧೀನ ಮತ್ತು ಸರ್ವೆ ಕಾರ್ಯದ ಬಗ್ಗೆ ತಿಳುವಳಿಕೆ ನೀಡಿದೆ. ಇಷ್ಟು ಅಗಲದ ಹೆದ್ದಾರಿಯ ಅಗತ್ಯತೆ ಏನಿದೆ ಎಂದು ಪ್ರಶ್ನಿಸಿದರು.
ತೋಟ, ಮತ್ತು ರಸ್ತೆ ಬದಿಯ ಕಟ್ಟಡವನ್ನು ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ. ಆದ್ದರಿಂದ ಈಗ ಇರುವ ರಸ್ತೆಯನ್ನು ದ್ವಿಗುಣ ಗೊಳಿಸಿ ಹೆದ್ದಾರಿ ನಿರ್ಮಿಸುವಂತಾಗಬೇಕು ಎಂದು ಅವರು ಒತ್ತಾಯಿಸಿದರು. ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಪದಾಧಿಕಾರಿಗಳಾದ ಐಪುಮಾಡ ದೇವಯ್ಯ, ಬಾದುಮಂಡ ಪೂಣಚ್ಚ ಹಾಜರಿದ್ದರು.