ನಾಪೋಕ್ಲು, ಜು. 27: ಕೊಡಗಿನ ಪ್ರಮುಖ ಪ್ರವಾಸಿತಾಣವಾದ ಚೇಲಾವರ ಜಲಪಾತ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಚೇಲಾವರ ಜಲಕನ್ಯೆಯ ಸೌಂದರ್ಯವನ್ನು ಹಾಡಿಹೊಗಳಿ ಹಿಂತಿರುಗುತ್ತಾರೆ.
ಆದರೆ ಚೇಲಾವರ ಜಲಪಾತದ ಅನತಿ ದೂರದಲ್ಲಿರುವ ಪೊನ್ನೋಳ ಪ್ರಾಥಮಿಕ ಶಾಲೆಯಿಂದ ಚೆಯ್ಯಂಡಾಣೆ ಪ್ರೌಢಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುರ್ಗತಿ ಮಾತ್ರ ಹೊರಜಗತ್ತಿನ ಕಣ್ಣಿಗೆ ಗೋಚರಿಸದಿರುವದು ವಿಪರ್ಯಾಸವಾಗಿದೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಡುವ ಪೊನ್ನೋಳ ಪ್ರಾಥಮಿಕ ಶಾಲೆಯಿಂದ ಚೆಯ್ಯಂಡಾಣೆ ಪ್ರೌಢಶಾಲೆಗೆ ಸಂಪರ್ಕ ಕಲ್ಪಿಸುವ ಸುಮಾರು ಐದು ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಚ್ಚಾರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರಯಾಸದಿಂದ ಸಂಚರಿಸಬೇಕಾಗಿದೆ.
ಈ ರಸ್ತೆಯ ಮದ್ಯೆ ಸಣ್ಣಹೊಳೆಯೊಂದು ಹರಿಯತ್ತಿದ್ದು, ಕಿರುಂಗೊಳ್ಳಿ ಸೇತುವೆ ಎಂದು ಕರೆಯಲಾಗುವ ಈ ಸ್ಥಳದಲ್ಲಿ ಸೇತುವೆ ಬದಲಿಗೆ ಎರಡು ದೊಡ್ಡಗಾತ್ರದ ಪೈಪ್‍ಗಳನ್ನು ಮಾತ್ರ ಅಳವಡಿಸಲಾಗಿದೆ. ಈ ಹೊಳೆಗೆ ಸಣ್ಣ ಸೇತುವೆಯನ್ನು ನಿರ್ಮಿಸುವ ಬದಲಿಗೆ ಕಳೆದ ಎರಡು ವರ್ಷಗಳ ಹಿಂದೆ ಎರಡು ದೊಡ್ಡ ಪೈಪ್‍ಗಳನ್ನು ಹಾಕಿ ಅದರ ಮೇಲೆ ಮಣ್ಣನ್ನು ಮುಚ್ಚಿಹೋಗಿದ್ದು, ಮಳೆಗಾಲದಲ್ಲಿ ಮಣ್ಣೆಲ್ಲಾ ಕೊಚ್ಚಿಹೋಗಿ ಇದೀಗ ಪೈಪ್‍ಗಳು ಮಾತ್ರ ಕಾಣುತ್ತಿವೆ, ಈ ಪೈಪ್‍ಗಳ ಮೇಲೆಯೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರಯಾಸದಿಂದ ಸಂಚರಿಸಬೇಕಾಗಿದೆ.
ಚೇಲಾವರ ಗ್ರಾಮದ ಮುಖ್ಯರಸ್ತೆಯಾದ ಈ ರಸ್ತೆಯನ್ನು ದುರಸ್ಥಿಪಡಿಸುವಂತೆ ಹಾಗೂ ಹೊಳೆಗೆ ಸೇತುವೆಯೊಂದನ್ನು ನಿರ್ಮಿಸುವಂತೆ ಸಂಬಂಧಿಸಿದ ಜನಪ್ರತಿನಿಧಿಗಳ ಬಳಿ ಹಲವು ಬಾರಿ ಮನವಿ ಮಾಡಿಕೊಂಡರು ಪ್ರಯೋಜನ ಮಾತ್ರ ಶೂನ್ಯವಾಗಿದೆ.
ಸ್ಥಳಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು ರಸ್ತೆ ದುರಸ್ತಿಪಡಿಸುವ ಭರವಸೆಯನ್ನು ನೀಡಿ ಹಿಂತಿರುಗಿದವರು ಮತ್ತೇ ಇತ್ತ ಕಡೆ ಸುಳಿಯುವದಿಲ್ಲವೆಂದು ಗ್ರಾಮಸ್ಥರಾದ ಪಟ್ಟಚೆರುವಂಡ ಗಗನ್, ಪಟ್ಟಚೆರುವಂಡ ಚಿಮ್ಮ ಹಾಗೂ ಪಟ್ಟಚೆರುವಂಡ ಪ್ರತಾಪ್ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಂಕ್ರಿಟ್ ರಸ್ತೆಯೊಂದಿಗೆ ಸೇತುವೆಯನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.
-ದುಗ್ಗಳ ಸದಾನಂದ