ವೀರಾಜಪೇಟೆ, ಜು.24: ಇಂದಿನ ರಾಜಕೀಯ ತನ್ನ ಮೌಲ್ಯವನ್ನು ಕಳೆದುಕೊಂಡಿದೆ, ಆಳುವವರಿಗೆ ಅಧಿಕಾರ ಬೇಕು, ಆದರೆ ಅದನ್ನು ಹೇಗೆ ಪಡೆಯಬೇಕು ಎಂಬ ಅರಿವಿಲ್ಲ. ಆದರಿಂದ ಇಂದು ರಾಜ್ಯ ಶಾಸ್ತ್ರದ ವಿಷಯದಲ್ಲಿ ಅಧ್ಯಾಯನ ಅತ್ಯಗತ್ಯವಾಗಿದೆ ಎಂದು ಬಾಳೆಲೆ ವಿಜಯಲಕ್ಷ್ಮೀ ಪದವಿಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕ ಅಶ್ವಿನಿಕುಮಾರ್ ಹೇಳಿದರು.

ವೀರಾಜಪೇಟೆ ಸರಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ರಾಜ್ಯಶಾಸ್ತ್ರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ರಾಜ್ಯಶಾಸ್ತ್ರದ ಓದಿನ ಆಗತ್ಯವೇನೆಂದರೆ ಆ ಮೂಲಕ ಉತ್ತಮ ನಾಗರಿಕರಾಗಲು, ನಮ್ಮ ಸರಕಾರ, ನಮ್ಮ ಸಂವಿಧಾನ , ಜನಪ್ರತಿನಿಧಿಗಳು ಇತ್ಯಾದಿಗಳನ್ನು ಅರಿತುಕೊಂಡು, ಶಾಸನಗಳು ನಮ್ಮ ಹಕ್ಕಿನ ಬಗ್ಗೆ ಜ್ಞಾನವನ್ನು ಸಂಪಾದಿಸಬಹುದು. ಈ ರಾಜ್ಯ ಶಾಸ್ತ್ರ ಅರಿತುಕೊಂಡರೆ ಕಾನೂನು ಮುರಿಯುವವರು ಜಾಗೃತಿ ಪಡೆಯಬಹುದು. ಕಾನೂನಿನ ಮಹತ್ವಗಳನ್ನು ಅರಿತುಕೊಳ್ಳಬಹುದು. ದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ರಂತಹ ಅನೇಕ ಮಹನೀಯರು ರಾಜ್ಯಶಾಸ್ತ್ರದ ಬಗ್ಗೆ ಆಳವಾದ ಅರಿವು ಹೊಂದಿದವರಾಗಿದ್ದರು. ಈ ಮೂಲಕ ಪ್ರಜೆ, ಜನಪ್ರತಿನಿಧಿ ಹೇಗಿರಬೇಕು ಅವರ ಕರ್ತವ್ಯಗಳೇನು ಅದನ್ನು ನಿರ್ವಹಿಸುವ ರೀತಿಯ ಬಗ್ಗೆ ಅರಿವು ಪಡೆದುಕೊಳ್ಳಬೇಕಿದೆ ಎಂದು ಅಶ್ಚಿನಿಕುಮಾರ್ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಕುಶಾಲನಗರದ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ ಸಿ. ಪುಟ್ಟರಾಜು ಮಾತನಾಡಿ, ಈ ಹಿಂದೆಯೇ ಪ್ಲೇಟೊ ಎಂಬ ತತ್ವಜ್ಞಾನಿ ರಾಜಕೀಯದ ಬಗ್ಗೆ ವಿವರಿಸಿದ್ದಾರೆ. ಆತ ರಾಜ್ಯದ ಪರಿಕಲ್ಪನೆ, ಜನಪ್ರತಿನಿಧಿಗಳು, ಆಳುವ ದೊರೆ ಬಗ್ಗೆ ವಿವರಿಸಿದ್ದಾನೆ ಅವನು ಹೇಳುವಂತೆ ಆಳುವ ರಾಜ ದಾರ್ಶನಿಕ, ತತ್ವ ಜ್ಞಾನಿಯಾಗಿದ್ದು , ಸಂಸಾರಿಯಾಗದೆ, ಆಸ್ತಿ ಹೊಂದಿರದೆ ಇರಬೇಕು. ಇಲ್ಲವಾದರೆ ಲಾಭದ ನಿರೀಕ್ಷೆಯಲ್ಲಿ ಆತ ಜನರ ಕ್ಷೇಮಾಭಿವೃದ್ಧಿ ಮರೆಯುತ್ತಾನೆ ಎಂದಿದ್ದ. ಇದನ್ನೆ ಇಂದು ಕಲ್ಯಾಣ ರಾಜ್ಯ ಎನ್ನುತ್ತಾರೆ ಆದರೆ ಈ ಕಲ್ಯಾಣ ರಾಜ್ಯ ಮೇಲಿನ ನಿಯಮಕ್ಕೆ ವಿರುದ್ಧವಾಗಿ ಸಾಗಿದೆ ಸರಕಾರ ಅಭಿವೃದ್ಧಿ ಪಥದಿಂದ ದೂರವಾಗುತ್ತಿದೆ. ಇಂದಿನ ರಾಜ್ಯದ ರಾಜಕೀಯ ಬೆಳವಣೆಗೆಯೇ ನಮ್ಮ ಪ್ರಜಾಪ್ರಭುತ್ವವು ನಾನಾ ರೂಪಗಳನ್ನು ತಾಳುತ್ತದೆ ಎನ್ನುವದಕ್ಕೆ ಉದಾಹರಣೆ. ಈ ರೀತಿ ಭಾರತ ಪ್ರಜಾಪ್ರಭುತ್ವ ಪ್ರಯೋಗಶಾಲೆ ಎಂದು ಜಗತ್ತು ಗುರುತಿಸಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ ಕೆ.ಟಿ ಬೋಪಯ್ಯ ಮಾತನಾಡಿದರು. ಇದೇ ಸಂದರ್ಭ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದು ದಾವಣಗೆರೆಗೆ ವರ್ಗವಾಗಿರುವ ಪ್ರೊ ಆರ್ ದಿವ್ಯ ಅವರನ್ನು ಬೀಳ್ಕೊಡಲಾಯಿತು. ವೇದಿಕೆಯಲ್ಲಿ ಪ್ರೊ ಎಂ.ಬಿ. ದಿವ್ಯ , ಉಪನ್ಯಾಸಕರಾದ ಎಂ.ವನಿತ್‍ಕುಮಾರ್, ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.