ಮಾಜಿ ನಗರಸಭಾಧ್ಯಕ್ಷ ನಂದಕುಮಾರ್ ಸಲಹೆ ಮಡಿಕೇರಿ, ಜು. 24: ಮಡಿಕೇರಿ ನಗರಸಭೆಗೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸದಂತೆ ತೆರಿಗೆದಾರರಿಗೆ ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಸಲಹೆ ನೀಡಿದ್ದಾರೆ.ಆಸ್ತಿ ತೆರಿಗೆಯಲ್ಲಿ ತೀವ್ರ ಗೊಂದಲವಿದ್ದು; ಪತ್ರಿಕೆಯಲ್ಲಿ ಈ ಬಗ್ಗೆ ಗಮನ ಸೆಳೆದಿದ್ದರೂ ಆಯುಕ್ತರು ಮೌನವಾಗಿದ್ದಾರೆ; ಜನತೆಯ ಸಂಕಷ್ಟಕ್ಕೆ ಸ್ಪಂದಿಸಬೇಕಾದ ನಗರಸಭೆ ಕರ್ತವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿರುವ ನಂದಕುಮಾರ್, ಈ ಬಗ್ಗೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಕೂಡಾ ಏಕೆ ಸ್ಪಂದಿಸುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ.
ಸದ್ಯಕ್ಕೆ ಆಸ್ತಿ ತೆರಿಗೆ ಪಾವತಿಸದಿರಿ
(ಮೊದಲ ಪುಟದಿಂದ) 2005ರ ಆಧಾರದಲ್ಲಿ ಹೊಸ ಅರ್ಜಿಗಳು ಮುದ್ರಿತಗೊಳ್ಳುತ್ತಿದ್ದರೂ; ಭೂಮಿಯ ಮೌಲ್ಯವನ್ನು ನಾಲ್ಕುಪಟ್ಟು ಏರಿಸಿ; ಕಂಪ್ಯೂಟರಿಗೆ ಅಳವಡಿಸಿರುವ ಪರಿಣಾಮ ತೆರಿಗೆದಾರರಿಗೆ ಅಧಿಕ ಹೊರೆಯಾಗುತ್ತಿದೆ; ಈ ಬಗ್ಗೆ ಮಾಹಿತಿ ಇದ್ದರೂ; ಸರಿಪಡಿಸಲು ನಗರಸಭೆ ಹಿಂದೇಟು ಹಾಕಿರುವದು ಖಂಡನೀಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜನಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಯಾದ ಬಳಿಕ ಚರ್ಚಿಸಿ ಪರಿಹಾರ ಕಂಡು ಹಿಡಿಯಬಹುದಾಗಿದ್ದು; ಅದುವರೆಗೆ ತೆರಿಗೆದಾರರು ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸದೆ ಇರಲು ಅವರು ಕರೆ ನೀಡಿದ್ದಾರೆ.
ಹಳೇ ಖಾಸಗಿ ಬಸ್ನಿಲ್ದಾಣದಲ್ಲಿ ಹೆಚ್ಚುವರಿ ಮೊತ್ತ ಪಾವತಿಸಿ ತಡೆಗೋಡೆ ನಿರ್ಮಿಸಲು ನಗರಸಭೆ ಮುಂದಾಗಿದ್ದು; ಈ ಬಗ್ಗೆ ತನಿಖೆ ಆಗಬೇಕೆಂದು ನಂದಕುಮಾರ್ ಆಗ್ರಹಿಸಿದ್ದಾರೆ.