ವೀರಾಜಪೇಟೆ, ಜು. 25: ನಗರದಲ್ಲಿ ದಿನದಿಂದ ದಿನಕ್ಕೆ ಶ್ವಾನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಾಲಾ ಮಕ್ಕಳು ಸೇರಿದಂತೆ ನಾಗರಿಕರಲ್ಲಿ ಆಂತಕ ಹೆಚ್ಚಾಗಿದ್ದು, ಕ್ರಮ ಕ್ಕೆಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಶ್ವಾನಗಳು ಮತ್ತು ಬೀಡಾಡಿ ಹಸುಗಳು ಮುಖ್ಯ ರಸ್ತೆಗಳಲ್ಲಿ ಸಾಗುತ್ತಿರುವದರಿಂದ ರಸ್ತೆಗಳಲ್ಲಿ ಸಂಚರಿಸಲು ಕಿರಿಕಿರಿ ಅನುಭವವಾಗುತ್ತಿದೆ. ಬೀದಿ ನಾಯಿಗಳ ಹಾವಳಿಯಿಂದ ಶಾಲಾ ಮಕ್ಕಳು, ನಾಗರಿಕರಿಗೆ ಕಚ್ಚುವ ಭೀತಿ ಎದುರಾಗಿದೆ. ಕಳೆದ ಹತ್ತು ದಿನಗಳ ಹಿಂದೆ ಹಸು ಮತ್ತು ಕರು ರಸ್ತೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ರಸ್ತೆಯಲ್ಲಿ ಅತಿ ವೇಗವಾಗಿ ಆಗಮಿಸಿದ ಕಾರು ಚಾಲಕ ರಸ್ತೆಯಲ್ಲಿದ್ದ ಹಸುವನ್ನು ಗಮನಿಸದೆ ಹಸುವಿನ ಮೇಲೆ ಕಾರು ಹರಿಸಿದ ಪರಿಣಾಮ ಹಸು ಸ್ಥಳದಲ್ಲೇ ಮೃತಪಟ್ಟಿತ್ತು.

ಬೀಡಾಡಿ ಹಸುಗಳಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಡಕುಂಟಾಗಿದೆ. ಅಲ್ಲದೆ ವಾಹನಗಳು ಮುಂದೆ ಚಲಿಸಲಾಗದೆ ವಾಹನ ದಟ್ಟಣೆ ಎದುರಾಗುತ್ತಿದೆ. ಹಲವು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಬೀಡಾಡಿಗಳನ್ನು ನಿಯಂತ್ರಿಸಲು ದನದ ದೊಡ್ಡಿ ಆರಂಭಿಸಿ ಹಿಡಿದು ತಂದು ದೊಡ್ಡಿಗೆ ಸೇರಿಸಲಾಗುತಿತ್ತು. ನಂತರದಲ್ಲಿ ಹಸುವಿನ ಮಾಲೀಕರಿಗೆ ದಂಡ ವಿಧಿಸಲಾಗುತ್ತಿತ್ತು. ಕಳೆದ ಐದು ವರ್ಷಗಳಿಂದ ದನದ ದೊಡ್ಡಿ ಕಣ್ಮರೆಯಾಗಿದೆ. ಬೀಡಾಡಿ ಜಾನುವಾರುಗಳ ಸಮಸ್ಯೆ ಒಂದೆಡೆಯಾದರೆ ಬೀದಿ ನಾಯಿಗಳ ಹಾವಳಿ ಮತ್ತೊಂದಡೆ. ಬೆಳಿಗ್ಗಿನ ಸಮಯದಲ್ಲಿ ಶಾಲಾ ಮಕ್ಕಳು, ಕಾರ್ಮಿಕ ವರ್ಗ, ನೌಕರರು ಹೀಗೆ ನಾಗರಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಈ ದಿಸೆಯಲ್ಲಿ ಪಟ್ಟಣ ಪಂಚಾಯಿತಿ ಕ್ರಮಕ್ಕೆ ಮುಂದಾಗಬೇಕು. ಬೀಡಾಡಿ ಜಾನುವಾರುಗಳು ಮತ್ತು ಬೀದಿ ನಾಯಿಗಳ ನಿಯಂತ್ರಣ ಮಾಡುವಂತೆ ಸಾರ್ವಜನಿಕರ ಒತ್ತಾಯವಾಗಿದೆ.

- ಕೆ.ಕೆ.ಎಸ್.