ಮಡಿಕೇರಿ, ಜು. 25: ಮಡಿಕೇರಿಯ ಗಾಂಧಿ ಮೈದಾನ ಬಳಿಯಿಂದ ಹಿಡಿದು ರೇಸ್‍ಕೋರ್ಸ್ ರಸ್ತೆಗಾಗಿ ವೆಬ್ಸ್ ಬಳಿ ಇರುವ ನೂತನ ಬಸ್ ನಿಲ್ದಾಣದವರೆಗೆ ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಹಿರಿಯ ನಾಗರಿಕರು ಜಿಲ್ಲಾಡಳಿತ, ನಗರಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಚಾಲನೆ ದೊರೆತ ಬಳಿಕ ಈ ರಸ್ತೆಯಲ್ಲಿ ಬಸ್‍ಗಳೊಂದಿಗೆ ಇತರ ವಾಹನಗಳ ಸಂಖ್ಯೆ ಹೆಚ್ಚಳಗೊಂಡಿದೆ. ಕೆಲವೊಂದು ಕಡೆಗಳಲ್ಲಿ ರಸ್ತೆ ಬದಿ ಮಣ್ಣು ಕುಸಿದಿದ್ದು; ನಡೆದಾಡಲು ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು ಶಾಲೆಗಳಿಗೆ ಹಾಗೂ ಹಿರಿಯ ನಾಗರಿಕರು ಅನೇಕ ವರ್ಷಗಳಿಂದ ಬೆಳಿಗ್ಗೆ ಹಾಗೂ ಸಂಜೆ ವೇಳೆಗೆ ವಾಯುವಿಹಾರ ಹೋಗುತ್ತಿರುತ್ತಾರೆ. ಇದೀಗ ಬಸ್‍ಗಳು ಸಂಚರಿಸುವಾಗ ರಸ್ತೆ ಬದಿಯ ತನಕ ಬರುತ್ತಿದ್ದು; ನಡೆದಾಡಲು ಭಯವಾಗುತ್ತಿದೆ. ಹಾಗಾಗಿ ರಸ್ತೆಯ ಒಂದು ಬದಿಯಲ್ಲಿ ಹಿರಿಯ ನಾಗರಿಕರ ಹಾಗೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪಾದಚಾರಿ ಮಾರ್ಗ ಕಲ್ಪಿಸಿಕೊಟ್ಟಲ್ಲಿ ಅನುಕೂಲವಾಗಲಿದೆ. ಅಲ್ಲದೆ ಪ್ರಾಣಾಪಾಯ ಕೂಡ ತಪ್ಪಿಸಬಹುದಾಗಿದೆ ಎಂದು ಹಿರಿಯ ನಾಗರಿಕರು ‘ಶಕ್ತಿ’ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ರಸ್ತೆ ದುಸ್ಥಿತಿ ಬಗ್ಗೆ, ಅಪಾಯವಿರುವ ಬಗ್ಗೆ ಏಪ್ರಿಲ್ ತಿಂಗಳಲ್ಲೇ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ನಗರಸಭೆಗೆ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುವದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.