ಒಡೆಯನಪುರ, ಜು.25: ಸಮೀಪದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಹುಲ್ಕೊಡು ಗ್ರಾಮದಲ್ಲಿ ಕಳೆದ 1 ವಾರದಿಂದ ಕಾಡಾನೆಗಳು ಬೀಡುಬಿಟ್ಟಿವೆ. ರಾತ್ರಿ ವೇಳೆಯಲ್ಲಿ ಸುಮಾರು 5 ಕಾಡಾನೆಗಳ ಹಿಂಡು ರೈತರ ಹೊಲಗದ್ದೆ, ಬಾಳೆ ತೋಟ, ಕಾಫಿತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಫಸಲನ್ನು ನಷ್ಟ ಪಡಿಸುತ್ತಿದೆ ಎಂದು ಈ ಭಾಗದ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಬುಧವಾರ ರಾತ್ರಿ ಕಾಡಾನೆ ಹಿಂಡು ಗ್ರಾಮದ ಎಚ್.ಎಲ್.ಮಂಜುನಾಥ್ ಎಂಬವರ ಗದ್ದೆಗೆ ಬಂದು ಬತ್ತದ ಸಸಿಯನ್ನು ತುಳಿದು ಧ್ವಂಸಗೊಳಿಸಿದ್ದು, ಸುಮಾರು 2 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಗಿಡ ಮತ್ತು ಕಾಫಿಗಿಡ ಗಳನ್ನು ತುಳಿದು ನಾಶ ಪಡಿಸಿದ್ದು ಇದರಿಂದ ಅಪಾರ ಪ್ರಮಾಣದಲ್ಲಿ ಕೃಷಿ ಫಸಲು ನಷ್ಟವಾಗಿದೆ ಎಂದು ಅವರು ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಾಡಾನೆಗಳ ಹಾವಳಿ ಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.