ಕುಶಾಲನಗರ, ಜು. 25: ಗುರುಕುಲ ಎಜ್ಯುಕೇಶನಲ್ ಆಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಗುರುಕುಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಜಂಟಿ ಆಶ್ರಯದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಪಟ್ಟಣದ ಗೌಡ ಸಮಾಜ ಬಳಿಯ ಪಟೇಲ್ ಕಾಂಪ್ಲೆಕ್ಸ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಪಟೇಲ್ ಕಾಂಪ್ಲೆಕ್ಸ್ ಮಾಲೀಕ ಎಂ.ಕೆ. ಧನರಾಜ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ ಪ್ರಾರಂಭಗೊಳ್ಳಲು ಅವಿರತ ಶ್ರಮಿಸಿದ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು, ತರಬೇತಿ ಕೇಂದ್ರದಲ್ಲಿ ಉಚಿತವಾಗಿ ಬೌದ್ಧಿಕ ಶ್ರಮದಾನ ನೀಡಿದ ಡಿ. ಮೇಘಶ್ರೀ ಮತ್ತು ಕೇಂದ್ರದ ಮಾರ್ಗದರ್ಶನದಿಂದ 2019ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ವೈದ್ಯಕೀಯ ವಿಭಾಗದಲ್ಲಿ ಸ್ಥಾನ ಪಡೆದ ಎನ್.ಬಿ. ಸಂಗೀತ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಗುರುಕುಲ ಟ್ರಸ್ಟ್ ಅಧ್ಯಕ್ಷ ಕುಮಾರ್ ಪ್ರಾಸ್ತಾವಿಕ ನುಡಿಗಳಾಡಿ, ಸಾಧನೆಗೆ ಪೂರಕವಾದ ಪರಿಶ್ರಮ, ನಿರಂತರ ಪ್ರಯತ್ನಗಳು ಯಶಸ್ಸಿನ ಹಾದಿಗೆ ಕೊಂಡೊಯ್ಯುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ಪ.ಪಂ. ಸದಸ್ಯರಾದ ಎಂ.ಬಿ. ಸುರೇಶ್, ಎಪಿಎಂಸಿ ಅಧ್ಯಕ್ಷ ಎಂ.ಡಿ. ರಮೇಶ್, ತರಬೇತಿ ಕೇಂದ್ರದ ಪೋಷಕರಾದ ಉ.ರಾ. ನಾಗೇಶ್, ಜಂಶಿದ್ ಅಹಮ್ಮದ್ ಖಾನ್, ಟ್ರಸ್ಟಿ ರೂಪಾ ಮತ್ತಿತರರು ಇದ್ದರು.