ಕೂಡಿಗೆ, ಜು. 25: ಸರ್ಕಾರಿ ಪದವಿ ಪೂರ್ವ ಕಾಲೇಜು ಶಿರಂಗಾಲದಲ್ಲಿ ಇಂದು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ 2019-20 ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.

ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎನ್ ಬಿ ಮಹೇಶ್, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದರ ಮೂಲಕ ತಮ್ಮ ಅಭಿವೃದ್ಧಿ ಸಾಧಿಸಬಹುದು ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಕಾರ್ಯ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದ ಶಿರಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಎನ್.ಎಸ್. ರಮೇಶ್ ಅವರು, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ನಾಯಕತ್ವದ ಗುಣ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾದರೆ ಎನ್‍ಎಸ್‍ಎಸ್ ಅವಶ್ಯಕ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಎಸ್ ಎಸ್ ಚಂದ್ರಶೇಖರ್ ಮಾತನಾಡಿ, ದೇವತಾ ಸಮಿತಿಯ ವತಿಯಿಂದ ಕಾಲೇಜು ಮತ್ತು ಪ್ರೌಢಶಾಲೆಗೆ ತಲಾ ಇಪ್ಪತ್ತೈದು ಸಾವಿರ ರೂಗಳ ದತ್ತಿಯನ್ನು ಇಡಲು ತೀರ್ಮಾನಿಸಲಾಗಿದೆ. ಎಂದರು.

ಈ ಹಣದಿಂದ ವಾರ್ಷಿಕವಾಗಿ ಬರುವ ಬಡ್ಡಿಯನ್ನು ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಉಪಯೋಗಿಸಿ ಕೊಳ್ಳಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಶಿರಂಗಾಲದ ಸುತ್ತಮುತ್ತಲಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಅವರಿಗೆ ನೆನಪಿನ ಕಾಣಿಕೆಯನ್ನು ನೀಡುವದರ ಮೂಲಕ ಗೌರವಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶವನ್ನು ಕಟ್ಟುವ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.

ಪ್ರಥಮ ಪಿಯುಸಿಗೆ ಆಗಮಿಸಿರುವ ವಿದ್ಯಾರ್ಥಿಗಳಿಗೆ ಫೈಲುಗಳನ್ನು ನೀಡುವದರ ಮೂಲಕ ಆತ್ಮೀಯವಾಗಿ ಕಾಲೇಜಿಗೆ ಬರ ಮಾಡಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ದೇವತಾ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಕಾರ್ಯದರ್ಶಿಗಳಾದ ಮಹೇಶ್ ಮಾಜಿ ಕಾರ್ಯದರ್ಶಿಗಳಾದ ಸಿ ಎನ್ ಲೋಕೇಶ್ ತೊರೆನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕುಮಾರ್ ಹೆಬ್ಬಾಲೆ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಗಣೇಶ್ ಶಿರಂಗಾಲ ಪ್ರೌಢಶಾಲೆಯ ಸೋಮಯ್ಯ ವೇದಿಕೆಯಲ್ಲಿ ಇದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಕೆ. ಭವಾನಿ ಕನ್ನಡ ಉಪನ್ಯಾಸಕರು ಕಾಲೇಜಿನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು.