ಸೋಮವಾರಪೇಟೆ, ಜು. 24: ಪ್ರಕೃತಿಯನ್ನು ಉಳಿಸಿ, ಬೆಳೆಸಿ, ರಕ್ಷಿಸಿದರೆ ಮಾತ್ರ ಅದು ಸಮಾಜದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಸೋಮವಾರಪೇಟೆ ವಲಯಾರ ಣ್ಯಾಧಿಕಾರಿ ಲಕ್ಷ್ಮೀಕಾಂತ್ ಅಭಿಪ್ರಾಯಿಸಿದರು.

ಸಮೀಪದ ಬೇಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ತಾಲೂಕು ಸಂಸ್ಥೆಯು ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸುತ್ತಮುತ್ತಲ ಪರಿಸರ ಉತ್ತಮವಾಗಿದ್ದರೆ ಸಕಾಲದಲ್ಲಿ ಮಳೆ, ಬೆಳೆ ಉತ್ತಮವಾಗಿರುತ್ತದೆ. ಜಿಲ್ಲೆಯ ಅರಣ್ಯಗಳಲ್ಲಿ ಸುಮಾರು 300ಕ್ಕೂ ಅಧಿಕ ಜಾತಿಯ ಮರಗಳಿವೆ. ಇದರಿಂದಾಗಿಯೆ ಕೊಡಗಿನ ಪರಿಸರ ವೈವಿಧ್ಯತೆಯಿಂದ ಕೂಡಿದೆ. ಈ ಪರಿಸರವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಯೋಗೇಶ್ ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸಿ ಹಸ್ತಾಂತರಿಸಬೇಕಿದೆ ಎಂದು ಅಭಿಪ್ರಾಯಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ತಾಲೂಕು ಸಂಸ್ಥೆ ಅಧ್ಯಕ್ಷ ಬಿ.ಎ. ಭಾಸ್ಕರ್ ಮಾತನಾಡಿ, ಬೀಜದುಂಡೆಗಳ ಪ್ರಯೋಗ ಅಷ್ಟೊಂದು ಯಶಸ್ವಿಯಾಗದ ಹಿನ್ನೆಲೆ ಸಂಸ್ಥೆ ವತಿಯಿಂದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳ ಸಹಿತ ಶಿಕ್ಷಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿನೊಳಗೆ ತೆರಳಿ ಬಯಲು ಇರುವ ಪ್ರದೇಶಗಳಲ್ಲಿ ಭೂಮಿಯೊಳಗೆ ನೇರವಾಗಿ ಬೀಜಗಳನ್ನು ಬಿತ್ತುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ್, ದೊರೆ ವೀರರಾಜೇಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕ ತಿಪ್ಪೇಸ್ವಾಮಿ, ವನಪಾಲಕರಾದ ಎಂ.ಕೆ. ಮನು, ಅರಣ್ಯ ರಕ್ಷಕ ಮೋಹನ್, ವೀಕ್ಷಕ ಸುಂದರ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಸಂಯೋಜಕಿ ರಂಜಿನಿ, ತಾಲೂಕು ಸಂಸ್ಥೆಯ ಪ್ರ. ಕಾರ್ಯದರ್ಶಿ ಟಿ.ಎಸ್. ಚಂದ್ರಶೇಖರ್, ಖಜಾಂಚಿ ಕೆ.ಟಿ. ಚಂದ್ರಕಲಾ, ಪ್ರಮುಖರುಗಳಾದ ಎಂ.ಎಸ್. ಗಣೇಶ್, ಎಚ್.ಜಿ. ಸೋಮಶೇಖರಾಚಾರ್, ರಮೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಬೇಳೂರು ಅರಣ್ಯದಲ್ಲಿ ಹೊಂಗೆ, ಬೇವಿನ ಬೀಜಗಳನ್ನು ನಾಟಿ ಮಾಡಲಾಯಿತು.