ಕೂಡಿಗೆ, ಜು. 24: ಕುಶಾಲನಗರ ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಜ್ವರ ಹಾಗೂ ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭಯದ ಭೀತಿ ಎದುರಾಗಿದೆ. ರೋಗಗಳು ಹರಡುವ ಮುನ್ಸೂಚನೆ ಇರುವದರಿಂದ ಕೂಡಿಗೆ ಗ್ರಾಮ ಪಂಚಾಯಿತಿಯು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿದ್ದು, ಇದು ರೋಗರುಜಿನಗಳಿಗೆ ಆಹ್ವಾನ ನೀಡುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚರಂಡಿಯಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಚಿಕುಂಗುನ್ಯ, ಡೆಂಗ್ಯೂನಂತಹ ರೋಗಗಳು ಹರಡುವ ಭೀತಿ ಜನರಲ್ಲಿದ್ದು, ಚರಂಡಿಗಳನ್ನು ಸರಿಯಾಗಿ ಶುಚಿಗೊಳಿಸಬೇಕು. ಚರಂಡಿಗಳಿಗೆ ಡಿಡಿಟಿ ಪೌಡರ್ಗಳನ್ನು ಹಾಗೂ ಸೊಳ್ಳೆಗಳ ನಿರ್ಮೂಲನಾ ಔಷಧಿಗಳನ್ನು ಸಿಂಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.