*ಗೋಣಿಕೊಪ್ಪ, ಜು. 24: ಕರ್ನಾಟಕ ರೀಜನ್ ಐಸಿಎಸ್ಇ ಸ್ಕೂಲ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾಲ್ಸ್ ಶಾಲೆ ಚಾಂಪಿಯನ್ಶಿಪ್ ಗಳಿಸಿದೆ.
ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ನಡೆದ ಸ್ಪರ್ಧೆಯು ಬಾಲಕ ಮತ್ತು ಬಾಲಕಿಯರ ವಿಭಾಗವನ್ನು ಒಳಗೊಂಡಂತೆ ಒಟ್ಟು 6 ವಿಭಾಗಗಳಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಕಾಲ್ಸ್ ಶಾಲೆಯ ಸ್ಪರ್ಧಿಗಳು ಅತಿ ಹೆಚ್ಚು ಚಿನ್ನದ ಪದಕ ಗಳಿಸಿದರು.
ಆತಿಥೇಯ ಕೂರ್ಗ್ ಪಬ್ಲಿಕ್ ಶಾಲೆ 19 ರ ವಯೋಮಾನದ ವಿಭಾಗದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದುಕೊಂಡಿತು. ಚಿಕ್ಕಮಗಳೂರು ಆಂಬರ್ ವ್ಯಾಲಿ ಶಾಲೆ ತೃತೀಯ ಸ್ಥಾನ ಗಳಿಸಿತು. 8ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿ ಗಳನ್ನು 14, 17 ಮತ್ತು 19 ರ ವಯೋಮಾನದ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು.
ತಲಾ 10 ಮೀಟರ್ ಅಂತರದಲ್ಲಿ ಓಪನ್ ಸೈಟ್, ಪೀಪ್ ಸೈಟ್, ಪಿಸ್ತೂಲ್ ಸೈಟ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 10 ಮೀಟರ್ ಅಂತರದಲ್ಲಿ ಪಾಯಿಂಟ್ ಇಡಲಾಗಿತ್ತು. ಪ್ರತಿ ಸ್ಪರ್ಧೆಗಳು 90 ನಿಮಿಷದಲ್ಲಿ 60 ಶೂಟ್ಗಳನ್ನು ಪ್ರಯೋಗಿಸಲು ಅವಕಾಶವಿದ್ದಿತು. ವಿಜೇತರಾದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಕೊಡಗು ಸೇರಿದಂತೆ ಮೈಸೂರು, ಹಾಸನ, ಬೆಂಗಳೂರು, ಹಾಸನ, ಮಂಡ್ಯ ಜಿಲ್ಲೆಯ 14 ಶಾಲೆಗಳ 70 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜೇತ ವಿದ್ಯಾರ್ಥಿಗಳಿಗೆ ಕಾಪ್ಸ್ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ. ತಿಮ್ಯಯ್ಯ, ಪ್ರಾಂಶುಪಾಲ ಬೆನ್ನಿ ಕೊರಿಯಾಕೋಸ್ ಬಹುಮಾನ ವಿತರಿಸಿದರು. ಶಿಕ್ಷಕ ಗಣೇಶ್, ಭೀಮಯ್ಯ, ಬೆಂಗಳೂರಿನ ದೀರೇಂದ್ರ ಸಿಂಗ್, ಮುಂಬೈನ ಪ್ರತೀಕ್ ದೇಶಮುಖ್ ಇದ್ದರು.
-ಎನ್.ಎನ್. ದಿನೇಶ್