ಸೋಮವಾರಪೇಟೆ, ಜು. 24: ಲಕ್ಷಾಂತರ ಮೌಲ್ಯದ ಬೀಟೆ, ತೇಗ ಮತ್ತು ನಂದಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಮರ ಸಹಿತ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸಮೀಪದ ಹಾನಗಲ್ಲು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ 20 ಬೀಟೆ ಮರ, 15 ತೇಗ, 9 ನಂದಿ ಮರದ ನಾಟಾಗಳನ್ನು ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಜಿ.ಕೆ.ಸುದರ್ಶನ್ (ಸುಧ) ಮತ್ತು ಹಾನಗಲ್ಲು ಗ್ರಾಮದ ಡಿ.ಈ. ಪವನ್ ಸೇರಿದಂತೆ ಇತರರು ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಅರಣ್ಯಾಧಿಕಾರಿಗಳ ಕಾರ್ಯಾ ಚರಣೆ ಸಂದರ್ಭ ವಾಹನ ಸೇರಿದಂತೆ ಮರಗಳನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದ ಲಕ್ಷಾಂತರ ಮೌಲ್ಯದ ಮರಗಳು, ಕೃತ್ಯಕ್ಕೆ ಬಳಸಿದ ಪಿಕ್‍ಅಪ್ ವಾಹನ (ಕೆ.ಎ. 12, 9133) ಬೆಂಗಾವಲಿಗೆ ಬಳಕೆಯಾಗಿದ್ದ ಎರಡು ದ್ವಿಚಕ್ರ ವಾಹನ (ಕೆ.ಎ. 12-ಎಲ್.0885 ಮತ್ತು ಕೆ.ಎ. 12-ಹೆಚ್.0263) ಗಳು, ಮರ ಕತ್ತರಿಸುವ ಯಂತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಎಸಿಎಫ್ ಕೆ.ಎ. ನೆಹರು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಡಿಆರ್‍ಎಫ್‍ಓ ಎಂ.ಕೆ. ಮನು, ಸತೀಶ್ ಕುಮಾರ್, ಸಿಬ್ಬಂದಿಗಳಾದ ಯತೀಶ್, ಕಿರಣ್, ಲೋಕೇಶ್, ಶ್ರೀಕಾಂತ್, ಸುಂದರ್, ಮೋಹನ್, ಸುದೀಪ್, ಜಗದೀಶ್ ಪಾಲ್ಗೊಂಡಿದ್ದರು.