ವೀರಾಜಪೇಟೆ, ಜು. 25: ವೀರಾಜಪೇಟೆಯ ಚಿಕ್ಕಪೇಟೆ ಯಲ್ಲಿರುವ ಪ.ಪಂ.ಗೆ ಸೇರಿದ ಸಾರ್ವಜನಿಕ ಬಾವಿಯನ್ನು ಎಂಟು ದಿನಗಳ ಹಿಂದೆಯೇ ಪಂ. ವೆಚ್ಚದಿಂದ ದುರಸ್ತಿ ಮಾಡಲಾಗಿದ್ದು ಸಾರ್ವಜನಿಕರ ಉಪಯೋಗಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎನ್. ಶ್ರೀಧರ್ ‘ಶಕ್ತಿ’ಗೆ ತಿಳಿಸಿದ್ದಾರೆ. ಚಿಕ್ಕಪೇಟೆಯ ಜಂಕ್ಷನ್‍ನಲ್ಲಿರುವ ಪಟ್ಟಣ ಪಂಚಾಯಿತಿಗೆ ಸೇರಿದ ಬಾವಿ ದುರಸ್ತಿಗೊಳಗಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಬಾವಿಯನ್ನು ದುರಸ್ತಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಲಾಯಿತ್ತೆಂದು ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಬಾವಿಯನ್ನು ಇಂದು ಪತ್ರಕರ್ತರಿಗೆ ಖುದ್ದಾಗಿ ತೋರಿಸಿದರು. ತಾ. 22ರ ‘ಶಕ್ತಿ’ ಸಂಚಿಕೆಯ ಎರಡನೇ ಪುಟದಲ್ಲಿ ಊರು ದೂರು ವಿಭಾಗದಲ್ಲಿ ಪ್ರಕಟಗೊಂಡ ‘ಚಿಕ್ಕಪೇಟೆ ಬಾವಿ ದುರಸ್ತಿ’ಯ ದೂರಿಗೆ ಅಧಿಕಾರಿಗಳು ತುರ್ತು ಸ್ಪಂದಿಸಿದ್ದಾರೆ.