ಸೋಮವಾರಪೇಟೆ, ಜು. 23: ಇಲ್ಲಿನ ನಗರ ಗೌಡ ಜನಾಂಗ ಒಕ್ಕೂಟದ ವಾರ್ಷಿಕ ಮಹಾಸಭೆ ಸ್ಥಳೀಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಎಂ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಪ್ರಕಾಶ್, ಒಕ್ಕೂಟದ ವತಿಯಿಂದ ಈವರೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರಲಾಗಿದೆ. ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ನೆಲೆಸಿರುವ ಗೌಡ ಜನಾಂಗ ಬಾಂಧವರನ್ನು ಸಂಘಟಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಸಂಘದ ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಮರಣ ನಿಧಿಯನ್ನು ಸ್ಥಾಪಿಸಲಾಗಿದೆ. ವಿವಿಧ ಸಂಘಗಳ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿದ್ದು, 80ಕ್ಕೂ ಅಧಿಕ ಮಂದಿ ವಿವಿಧ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲೂ ಸಂಘದ ವತಿಯಿಂದ ಸಮುದಾಯದ ಬೆಳವಣಿಗೆಗೆ ಶ್ರಮಿಸಲಾಗುವದು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಮಾತನಾಡಿ, ಸಮುದಾಯದ ಸಂಘಟನೆಗಳು ಬಲಗೊಂಡಾಗ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ವಿದ್ಯೆ ನಿಜವಾದ ಸಂಪತ್ತಾಗಿದ್ದು, ಸಮುದಾಯದ ಯಾವೊಬ್ಬ ಮಗುವೂ ವಿದ್ಯಾಭ್ಯಾಸದಿಂದ ವಂಚಿತಗೊಳ್ಳಬಾರದು ಎಂದು ಕಿವಿಮಾತು ನುಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಬಿ. ಯೋಗೇಂದ್ರ, ಕಾರ್ಯದರ್ಶಿ ಡಿ.ಕೆ. ಕಿರಣ್‍ಕುಮಾರ್, ಗೌರವಾಧ್ಯಕ್ಷ ಬನ್ನಳ್ಳಿ ಗೋಪಾಲ್, ಉಪ ಕಾರ್ಯದರ್ಶಿ ಎಂ.ಬಿ. ಉಮೇಶ್, ಖಜಾಂಚಿ ದರ್ಶನ್ ಸೇರಿದಂತೆ ನಿರ್ದೇಶಕರುಗಳು ಉಪಸ್ಥಿತರಿದ್ದರು.

2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ, ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

2019-20ನೇ ಸಾಲಿಗೂ ಹಳೆಯ ಆಡಳಿತ ಮಂಡಳಿಯನ್ನೇ ಮುಂದುವರೆಸಲು ಸಭೆ ಒಪ್ಪಿಗೆ ಸೂಚಿಸಿತು. ಸಂಘದ ಏಳಿಗೆಗೆ ಶ್ರಮಿಸುತ್ತಿರುವ ಹರಪಳ್ಳಿ ರವೀಂದ್ರ ಹಾಗೂ ಇತ್ತೀಚೆಗೆ ನಿವೃತ್ತಿಯಾದ ಶಿಕ್ಷಕ ಹೆಚ್.ಎಂ. ರಮೇಶ್ ಅವರುಗಳನ್ನು ಸನ್ಮಾನಿಸಲಾಯಿತು.

ವಾರ್ಷಿಕ ಮಹಾಸಭೆಗೂ ಮುನ್ನ ಸಂಘದ ಸದಸ್ಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನÀ ವಿತರಿಸಲಾಯಿತು.