ಗೋಣಿಕೊಪ್ಪ ವರದಿ, ಜು. 24: ಹೆಬ್ಬಾಲೆ ದೇವರಕಾಡಿನಲ್ಲಿ ಬಲಗಾಲು ಮುರಿದುಕೊಂಡಿದ್ದ ಗಂಡು ಕಾಡಾನೆಗೆ ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡಿ ಅರಣ್ಯದಲ್ಲಿಯೇ ಬಿಡಲಾಗಿದೆ.
ಆನೆಗೆ ಸುಮಾರು 35 ವರ್ಷ ವಯಸ್ಸಾಗಿದ್ದು, ಬಲಗಾಲಿನ ಒಳಭಾಗದಲ್ಲಿ ಮೂಳೆ ಮುರಿದಿರುವದರಿಂದ ಚಿಕಿತ್ಸೆ ನೀಡಲು ಆಗದೆ ಕಾರ್ಯಾಚರಣೆ ತಂಡ ನಿರಾಸೆ ಅನುಭವಿಸಿತ್ತು. ಆನೆಯನ್ನು ಕಾಡಿನಿಂದ ಕರೆ ತರಲು ಲಾರಿಗೆ ಹತ್ತಿಸಲು ಕೂಡ ತೊಂದರೆಯಾಗಿರುವದರಿಂದ ಸ್ಥಳದಲ್ಲಿಯೇ ನೋವು ನಿವಾರಕ ಚಿಕಿತ್ಸೆ ನೀಡಿ ಅರಣ್ಯದಲ್ಲಿಯೇ ಬಿಡಲಾಯಿತು.
ಅರಣ್ಯದಲ್ಲಿ ಕುಂಟುತ್ತಾ ನಡೆಯಲು ಕಷ್ಟ ಪಡುತ್ತಿದ್ದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ಮುಂದಾದರು. ಕಾಲಿನ ಮೇಲಿನ ಭಾಗಗಳಲ್ಲಿ ಗಾಯದ ಗುರುತುಗಳು ಇಲ್ಲದ ಕಾರಣ ಕಾಡಿನಲ್ಲಿ ಗುಂಡಿಗೆ ಬಿದ್ದು ಕಾಲಿನ ಒಳಭಾಗ ಮುರಿದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಸಾಕಾನೆ ಅಭಿಮನ್ಯು ಹಾಗೂ ಕೃಷ್ಣ ಆನೆಗಳ ಸಹಕಾರದಲ್ಲಿ ಸೆರೆ ಹಿಡಿದು ವೈದ್ಯ ಡಾ. ಮುಜಿಬ್ ರೆಹಮನ್ ಮುಂದಾಳತ್ವದಲ್ಲಿ ಚಿಕಿತ್ಸೆ ನೀಡಲಾಯಿತು. ಈ ಸಂದÀರ್ಭ ಎಸಿಎಫ್ ಶ್ರೀಪತಿ, ತಿತಿಮತಿ ವಲಯ ಅರಣ್ಯ ಅಧಿಕಾರಿ ಅಶೋಕ್ ಉಪಸ್ಥಿತರಿದ್ದರು.