ಸೋಮವಾರಪೇಟೆ, ಜು. 24: ಇಲ್ಲಿನ ಒಕ್ಕಲಿಗರ ಯುವ ವೇದಿಕೆ ವತಿಯಿಂದ ತಾ. 27 ರಂದು ಅಬ್ಬೂರುಕಟ್ಟೆ ಸಮೀಪದ ಹೊಸಳ್ಳಿ ಗ್ರಾಮದ ಡಿ.ಈ. ಕುಶಾಲಪ್ಪ ಅವರ ಗದ್ದೆಯಲ್ಲಿ 6ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 27ರಂದು ಪೂರ್ವಾಹ್ನ 9 ಗಂಟೆಗೆ ಹೊಸಳ್ಳಿ ಗ್ರಾಮದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವದು. ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಎಂ.ಎನ್.ದೇವರಾಜ್ ಅವರುಗಳು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಜಯಣ್ಣ, ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ಅಧ್ಯಕ್ಷ ವಿನೋದ್‍ಕುಮಾರ್, ಗ್ರಾ.ಪಂ. ಸದಸ್ಯೆ ಸುಜಾತಾ ಚಂಗಪ್ಪ, ಹೊಸಳ್ಳಿ ಗ್ರಾಮಾಧ್ಯಕ್ಷ ಹೆಚ್.ಕೆ. ಲೋಕೇಶ್ ಅವರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪುರುಷರಿಗೆ ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ, ವಾಲಿಬಾಲ್, ಗದ್ದೆ ಓಟ, ದಂಪತಿಗಳಿಗೆ ಕೆಸರುಗದ್ದೆ ಓಟ, ಮಹಿಳೆಯರಿಗೆ ಥ್ರೋಬಾಲ್, ಗದ್ದೆ ಓಟ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು, ಪ್ರಥಮ, ದ್ವಿತೀಯ ಸ್ಥಾನ ಗಳಿಸುವವರಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುವದು. ತಾ. 25ರೊಳಗೆ ಭಾಗವಹಿಸುವವರು ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಒಕ್ಕಲಿಗ ಸಮುದಾಯ ಬಾಂಧವರಿಗೆ ಆಯೋಜಿಸಿರುವ ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದ್ದಲ್ಲಿ ಮೊ: 7760578902, 9380187756 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ದೀಪಕ್ ಹೇಳಿದರು.ಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಕೆ.ಟಿ. ದಯಾನಂದ, ಉಪಾಧ್ಯಕ್ಷ ನತೀಶ್ ಮಂದಣ್ಣ, ನಿರ್ದೇಶಕ ಅಶೋಕ್, ಪೃಥ್ವಿ ಅವರುಗಳು ಉಪಸ್ಥಿತರಿದ್ದರು.