ಗೋಣಿಕೊಪ್ಪಲು, ಜು. 22: ಗೋಣಿಕೊಪ್ಪಲಿನ ಪಾಲಿಬೆಟ್ಟ ರಸ್ತೆಯಲ್ಲಿರುವ ಮನೆಯೊಂದರಲ್ಲಿ 1968ರಲ್ಲಿ 11 ವಿದ್ಯಾರ್ಥಿಗಳೊಂದಿಗೆ ಸಂತ ಥೋಮಸ್ ಶಾಲೆ ಆರಂಭಗೊಂಡಿತು.1969 ರಲ್ಲಿ ಸುಮಾರು 10 ಎಕೆರೆ ನಿವೇಶನವನ್ನು ಖರೀದಿ ಮಾಡಿ ನರ್ಸರಿ ಹಾಗೂ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತು. 2000 ಇಸವಿಯಲ್ಲಿ ಪ್ರೌಢಶಾಲೆಯನ್ನು ಆರಂಭ ಮಾಡಿದ್ದು, ಇದೀಗ ವರ್ಷಂಪ್ರತಿ ಶೇ.100 ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಸಂತ ಥೋಮಸ್ ಶಾಲೆಯಲ್ಲಿ ಒಟ್ಟು 912 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವದಾಗಿ ಶಾಲಾ ಮುಖ್ಯಸ್ಥ ಫಾ. ಜಾರ್ಜ್ ಹೇಳಿದ್ದಾರೆ.

ಸುವರ್ಣ ಮಹೋತ್ಸವ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಒರೆಗೆ ಹಚ್ಚಲು ಸುಮಾರು ರೂ.5 ಲಕ್ಷವೆಚ್ಚದಲ್ಲಿ ಬೃಹತ್ ವಸ್ತು ಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಗಿದೆ.

ತಾ.28 ರಂದು ಶಾಲಾ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ಉದ್ಧೇಶವಿದ್ದು, ಈವರೆಗೆ ಸುಮಾರು 50 ಸಾವಿರ ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ ದೇಶ ವಿದೇಶಗಳಲ್ಲಿ ಗೌರವಾನ್ವಿತ ಉದ್ಯೋಗದಲ್ಲಿದ್ದಾರೆ.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯ ವಿದ್ಯಾರ್ಥಿಗಳಿಗೂ ಹಲವು ಸ್ಪರ್ಧೆಗಳು, ಪೆÇೀಷಕರಿಗೆ ಕ್ರೀಡಾ ಸ್ಪರ್ಧೆಗಳು, ಅಕ್ಕ ಪಕ್ಕದ ಶಾಲಾ ವಿದ್ಯಾರ್ಥಿಗಳಿಗೆ ನೃತ್ಯ ಸ್ಪರ್ಧೆ ಏರ್ಪಡಿಸುವದು ಇತ್ಯಾದಿ ಕಾರ್ಯಕ್ರಮಗಳ ಉದ್ಧೇಶವಿದೆ ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿಗಳ ಸಂಘಟನೆ ಮತ್ತು ಪರಸ್ಪರ ಅನುಭವ ಹಂಚಿಕೊಳ್ಳುವದು, ಹಿರಿಯ ವಿದ್ಯಾರ್ಥಿಗಳ ಸಾಧನೆ ಕುರಿತು ಮನವರಿಕೆ, ಪ್ರಸ್ತುತ ಶಾಲಾ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮತ್ತು ವೃತ್ತಿ ಶಿಕ್ಷಣ ಕೋರ್ಸ್‍ಗಳ ಬಗ್ಗೆ ಮಾಹಿತಿ ನೀಡುವದು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮ, ಹಿರಿಯ ವಿದ್ಯಾರ್ಥಿ ಸಹಕಾರದೊಂದಿಗೆ ಅರ್ಹ ಬಡ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ನೆರವು ಕಲ್ಪಿಸುವದು, ತಾಂತ್ರಿಕ ಕೌಶಲ್ಯ ತರಬೇತಿ ಕಾರ್ಯಾಗಾರ ಆಯೋಜನೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವ ಉದ್ಧೇಶವಿದೆ ಎಂದು ನುಡಿದರು.

ಶಾಲಾ ಆಡಳಿತ ಮಂಡಳಿ ಸದಸ್ಯ ಎಂ.ಪಿ.ಕೇಶವ್‍ಕಾಮತ್ ಮಾತನಾಡಿ, ಗೋಣಿಕೊಪ್ಪಲಿನಲ್ಲಿ ಕನ್ನಡ ಮಾಧ್ಯಮ ಶಾಲೆ ಇದ್ದ ಸಂದರ್ಭ ಇಲ್ಲಿನ ಅಕ್ಕ ಪಕ್ಕದ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಂತ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಯಿತು. ವೀರಾಜಪೇಟೆ ಸಂತ ಅನ್ನಮ್ಮ ಶಾಲೆ ಸ್ಥಾಪನೆ ನಂತರ ತಾಲೂಕಿನಲ್ಲಿ ಆರಂಭಗೊಂಡ ದ್ವಿತೀಯ ಆಂಗ್ಲ ಮಾಧ್ಯಮ ಶಾಲೆ ಇದಾಗಿದೆ. ಇಡೀ ಜಿಲ್ಲೆಯಲ್ಲಿಯೇ ಇಲ್ಲಿ ಹೆಚ್ಚು ಬಡ ಮಧ್ಯಮ ವಿದ್ಯಾರ್ಥಿಗಳಿಗೆ ಕಡಿಮೆ ವಿದ್ಯಾರ್ಥಿ ಶುಲ್ಕದೊಂದಿಗೆ ಜ್ಞಾನಾರ್ಜನೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸದಸ್ಯರಾದ ಎ.ಜೆ. ಬಾಬು, ಪಿ.ಕೆ. ಪ್ರವೀಣ್, ಅಬ್ದುಲ್ ಸಮ್ಮದ್ ಮಾತನಾಡಿದರು. ಇದೇ ಸಂದರ್ಭ ಸದಸ್ಯ ಸಿ.ಜೆ. ವಿಲ್ಸನ್ ಅವರು ಗ್ರಂಥಾಲಯಕ್ಕೆ ಕೆ.ಎಂ.ಚಿಣ್ಣಪ್ಪ ಅವರ ಅನುಭವ ಕಥಾನಕ ‘ಕಾಡಿನೊಳ ಗೊಂದು ಜೀವ’ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು.

ಹಿರಿಯ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾವಣೆಗಾಗಿ 9449515432,9448346276 ಹಾಗೂ 9880818005 ಸಂಖ್ಯೆಗೆ ಕರೆ ಮಾಡಲು ತಿಳಿಸಿದ್ದಾರೆ.

- ಟಿ.ಎಲ್.ಎಸ್.