ಸೋಮವಾರಪೇಟೆ, ಜು. 22: ಕೊಡಗಿಗೆ ಅಕ್ರಮವಾಗಿ ಪಿಸ್ತೂಲ್ಗಳನ್ನು ಸರಬರಾಜು ಮಾಡುವ ಮಾಫಿಯಾ ಎಂಟ್ರಿ ಕೊಟ್ಟಿರುವ ಬಗ್ಗೆ ತಿಳಿದು ಬಂದಿದೆ.
ಹೊರ ರಾಜ್ಯದಿಂದ ಇಲ್ಲಿಗೆ ಕೂಲಿ ಕೆಲಸದ ನೆಪದಲ್ಲಿ ಬಂದ ಕೆಲವರು ಈ ಅಕ್ರಮ ಜಾಲವನ್ನು ಇಲ್ಲಿ ಬೆಳೆಸುತ್ತಿದ್ದು, ಇವರುಗಳಿಂದ ಈಗಾಗಲೇ ಅನೇಕ ಮಂದಿ ಪಿಸ್ತೂಲ್ ಪಡೆದಿರುವ ಬಗ್ಗೆ ಮೂಲಗಳಿಂದ ಗೊತ್ತಾಗಿದೆ.ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಈ ಜಾಲ ವ್ಯವಸ್ಥಿತವಾಗಿ ಬೀಡುಬಿಟ್ಟಿದ್ದು, ಮರಳು ಕೆಲಸಕ್ಕೆಂದು ಹೊರ ರಾಜ್ಯದಿಂದ ಆಗಮಿಸಿರುವ ವ್ಯಕ್ತಿಯೋರ್ವ ಜಾಲದ ಕಿಂಗ್ಪಿನ್ ಎಂಬದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಹೇಮಾವತಿ ನದಿಯಲ್ಲಿ ಮರಳು ತೆಗೆಯುವ ಕೆಲಸಕ್ಕೆ ಬಂದಿರುವ ಉತ್ತರ ಪ್ರದೇಶದ ಯುವಕನೇ ಈ ಜಾಲದ ಕೊಂಡಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈಗಾಗಲೇ ಕೊಡ್ಲಿಪೇಟೆ ಭಾಗದಲ್ಲಿ 15ಕ್ಕೂ ಅಧಿಕ ಮಂದಿಗೆ ಇಂತಹ ನಾಡ ಪಿಸ್ತೂಲ್ಗಳನ್ನು ನೀಡಿರುವ ಬಗ್ಗೆ ಸಂಶಯ ಏರ್ಪಟ್ಟಿದೆ.ಪಿಸ್ತೂಲ್ ಈತನ ಬಳಿ ಇದ್ದರೂ ಅಷ್ಟು ಸುಲಭಕ್ಕೆ ಯಾರಿಗೂ ಸಿಗುವದಿಲ್ಲ. ವ್ಯವಹಾರದಲ್ಲಿ ಭಾರೀ ಚಾಲಾಕಿಯಾಗಿರುವ ಈತನೊಂದಿಗೆ ಬಹಳ ಎಚ್ಚರಿಕೆಯಿಂದ ಡೀಲ್ ಮಾಡಿದರೆ ಮಾತ್ರ ಅಕ್ರಮ ಪಿಸ್ತೂಲ್ ಕೈಸೇರುತ್ತದೆ.ಪೊಲೀಸರಿಗೆ ತಿಳಿಸಿದರೆ ಶೂಟ್ ಮಾಡುತ್ತೇವೆ ಎಂದು ಬೆದರಿಸುವ ಈ ಯುವಕ ಈಗಾಗಲೇ ಕೊಡ್ಲಿಪೇಟೆಯ ಹಲವಷ್ಟು ಮಂದಿಗೆ ಪಿಸ್ತೂಲ್ ಮಾರಿದ್ದಾನೆ ಎಂದು ತಿಳಿದುಬಂದಿದೆ. ಸಮಾಜಘಾತುಕ ಕೃತ್ಯಗಳಿಗೆ ಬಳಕೆಯಾಗುವ ಇಂತಹ ಅಕ್ರಮ ಪಿಸ್ತೂಲ್ಗಳನ್ನು ಇಟ್ಟುಕೊಂಡವರು ಕೆಲವೊಮ್ಮೆ ಅಮಾಯಕರನ್ನು ಬೆದರಿಸುವ ಮಟ್ಟಕ್ಕೆ ಈಗಾಗಲೇ ಬೆಳೆದುಬಿಟ್ಟಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಕೊಡ್ಲಿಪೇಟೆ ವ್ಯಾಪ್ತಿಯಲ್ಲಿನ ಹೇಮಾವತಿ ನದಿಯಿಂದ ಮರಳನ್ನು ತೆಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಈ ಗುಂಪು, ಹೊಳೆಯಲ್ಲಿ ಮರಳು ತೆಗೆಯುವದರ ನಡುವೆಯೇ ಅಕ್ರಮವಾಗಿ ಪಿಸ್ತೂಲ್ಗಳನ್ನು ಮಾರಾಟ ಮಾಡುವ ‘ಸೈಡ್ ಬ್ಯುಸಿನೆಸ್’ ಹುಟ್ಟುಹಾಕಿದೆ. ಈ ಗುಂಪಿನ ನಾಯಕನೇ ಖುದ್ದು ಪಿಸ್ತೂಲ್ಗಳನ್ನು ಡೀಲ್ ಮಾಡುತ್ತಿದ್ದಾನೆ.
ಈತ ಈಗಾಗಲೇ ಮಂಗಳೂರು, ಭಟ್ಕಳ ವ್ಯಾಪ್ತಿಯಲ್ಲೂ ಪಿಸ್ತೂಲ್ ಮಾರಾಟ ಮಾಡಿರುವ ಬಗ್ಗೆ ಸಂಶಯಗಳು ಏರ್ಪಟ್ಟಿದ್ದು, ಹೊರ ರಾಜ್ಯದ ಕಾಳಸಂತೆಯಲ್ಲಿ ಕಡಿಮೆ ಹಣಕ್ಕೆ ಲಭಿಸುವ ಇಂತಹ ನಾಡ ಪಿಸ್ತೂಲ್ಗಳನ್ನು ತಂದು ಈ ಭಾಗದಲ್ಲಿ 50 ಸಾವಿರದಿಂದ 1 ಲಕ್ಷದವರೆಗಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಉತ್ತರ ಪ್ರದೇಶದಲ್ಲಿ ಇಂತಹ ಪಿಸ್ತೂಲ್ಗಳ ಮಾರಾಟ ಜಾಲ ಸಕ್ರಿಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಕರ್ನಾಟಕ್ಕೂ ಕಾಲಿಟ್ಟಿದೆ. ಕೊಡಗಿನ ಗಡಿಯಲಿ,್ಲ ಹಾಸನ ಜಿಲ್ಲೆಯನ್ನು ವಿಭಜಿಸಿ ಹರಿಯುವ ಹೇಮಾವತಿ ಒಡಲಿನಲ್ಲಿ ಮರಳು ತೆಗೆಯುವವನ ಕೈಯಲ್ಲಿ ಇಂತಹ ಪಿಸ್ತೂಲ್ಗಳು ಬಿಕರಿಯಾಗುತ್ತಿವೆ.
ಉತ್ತರ ಪ್ರದೇಶದಲ್ಲಿ 1 ಸಾವಿರದಿಂದ 5 ಸಾವಿರದವರೆಗೆ ನಾಡ ಪಿಸ್ತೂಲ್ಗಳು ಕಾಳಸಂತೆಯಲ್ಲಿ ಲಭಿಸುತ್ತಿವೆ. ಕಾನೂನಿನ ಕಣ್ಣುತಪ್ಪಿಸಿ ಸಮಾಜಘಾತುಕ ಶಕ್ತಿಗಳು ಇಂತಹ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇಂತಹ ಅಕ್ರಮ ಇದೀಗ ಕೊಡಗಿಗೂ ಕಾಲಿಟ್ಟಿದೆ. ಗಡಿಯಲ್ಲಿರುವ ಘಾತುಕ ಎಲ್ಲೆಲ್ಲಿ ತನ್ನ ಬಾಹು ಚಾಚಿದ್ದಾನೆ ಎಂಬದರ ಬಗ್ಗೆ ನಿಖರ ಮಾಹಿತಿ ಇನ್ನೂ ಲಭಿಸಿಲ್ಲವಾದರೂ, ಈತನಿಗೆ ಖೆಡ್ಡಾ ತೋಡಲು ಪೊಲೀಸ್ ಇಲಾಖೆ ತೆರೆಮರೆಯಲ್ಲಿ ಬಲೆ ಬೀಸಿದೆ ಎನ್ನಲಾಗಿದೆ.
1 ಸಾವಿರ ರೂಪಾಯಿಗೆ ಸಿಗುವ ನಾಡ ಪಿಸ್ತೂಲ್ನ್ನು ಕೊಡಗು ಸೇರಿದಂತೆ ಮಂಗಳೂರು, ಭಟ್ಕಳದಲ್ಲಿ ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಬಗ್ಗೆ ಸಂಶಯಗಳು ಮೂಡುತ್ತಿವೆ. ಈತನಿಂದ ಪಿಸ್ತೂಲ್ ಪಡೆದವರು ಇನ್ಯಾವ ಸಮಾಜಘಾತುಕ ಕೃತ್ಯದಲ್ಲಿ
(ಮೊದಲ ಪುಟದಿಂದ) ಭಾಗಿಯಾಗುತ್ತಾರೋ ಎಂಬ ಆತಂಕವೂ ಮೂಡಿದೆ.
ವೈಯುಕ್ತಿಕ ರಕ್ಷಣೆಗಾಗಿ ಪಿಸ್ತೂಲ್ಗಳನ್ನು ಹೊಂದಲು ಕಾನೂನಿನಲ್ಲಿಯೇ ಅವಕಾಶವಿದೆ. ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಪಾಲಿಸಿಕೊಂಡು ಕಾನೂನಿನ ಮೂಲಕವೇ ಪಿಸ್ತೂಲ್ ಹೊಂದಬಹುದಾಗಿದೆ. ಇಂತಹ ಪಿಸ್ತೂಲಿನ ಬಳಕೆಯ ಮೇಲೆ ಕಾನೂನಿನ ಕಣ್ಣು ಯಾವಾಗಲೂ ಇರುತ್ತದೆ.
ಆದರೆ ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಕ್ರಮವಾಗಿ ನಾಡ ಪಿಸ್ತೂಲ್ಗಳನ್ನು ಹೊಂದುವದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಇದರೊಂದಿಗೆ ಇಂತಹ ಪಿಸ್ತೂಲ್ಗಳನ್ನು ಮಾರಾಟ ಮಾಡುವದು, ಇಟ್ಟುಕೊಳ್ಳುವದು, ಸಾಗಾಟ ಮಾಡುವದು, ಉಪಯೋಗಿಸುವದೂ ಸಹ ಕಾನೂನಿನ ಪ್ರಕಾರ ಅಪರಾಧವೇ ಆಗಿದ್ದು, ಭಾರತೀಯ ದಂಡ ಸಂಹಿತೆಯಡಿ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಇದರೊಂದಿಗೆ ಯಾವದೇ ತಯಾರಕರ ಹೆಸರು, ಕಂಪೆನಿಯ ಗುರುತು ಇಲ್ಲದ ಆಯುಧವನ್ನು ಹೊಂದಿದ್ದರೂ ಸಹ ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯಡಿ ಅಪರಾಧವೇ ಆಗಿದೆ.
ಕೊಡಗಿನ ಮಟ್ಟಿಗೆ ಈ ಮಾಫಿಯಾ ಹೊಸತಾಗಿ ಕಾಣುತ್ತಿದೆ. ಇಲ್ಲಿ ಈವರೆಗೆ ಇಂತಹ ಅಕ್ರಮ ಪಿಸ್ತೂಲ್ ಬಳಕೆ ಕಂಡುಬಂದಿರಲಿಲ್ಲ. ಕೆಲವೊಂದು ಪ್ರಕರಣದಲ್ಲಿ ಪಿಸ್ತೂಲ್ಗಳು ಬಳಕೆಯಾಗಿದ್ದರೂ ಪೊಲೀಸರ ತನಿಖೆಯಿಂದ ‘ಅಕ್ರಮ ಪಿಸ್ತೂಲ್’ ಎಂದು ಕಂಡುಬಂದಿರಲಿಲ್ಲ.
ಆದರೆ ಇದೀಗ ಅಕ್ರಮ ಪಿಸ್ತೂಲ್ಗಳು ಜಿಲ್ಲೆಯ ಅಲ್ಲಲ್ಲಿ ಮಾರಾಟವಾಗಿವೆ. ಕೆಲವರು ‘ಕ್ರೇಜ್’ಗಾಗಿಯೂ ಪಿಸ್ತೂಲ್ ಖರೀದಿಸಿರುವ ಬಗ್ಗೆ ತಿಳಿದುಬಂದಿದೆ. ಇನ್ನು ಕೆಲವು ಪಿಸ್ತೂಲ್ಗಳು ಸಮಾಜಘಾತುಕ ಶಕ್ತಿಗಳಿಗೆ ಮಾರಾಟವಾಗಿರುವ ಬಗ್ಗೆಯೂ ಸಂಶಯವಿದ್ದು, ಮಾಫಿಯಾದ ಕಿಂಗ್ಪಿನ್ನ ಬಂಧನವಾದರೆ ಎಲ್ಲಾ ಸತ್ಯಾಂಶ ಹೊರಜಗತ್ತಿಗೆ ಗೊತ್ತಾಗಲಿದೆ.
ಪೊಲೀಸರ ಕಾರ್ಯದಕ್ಷತೆಗೆ ಸವಾಲಾಗಿರುವ ಈ ಪ್ರಕರಣವನ್ನು ಆದಷ್ಟು ಬೇಗ ಭೇದಿಸಬೇಕಿದೆ. ಸ್ಥಳೀಯರ ಸಹಕಾರ ಪಡೆದು ಈ ಜಾಲವನ್ನು ಮಟ್ಟಹಾಕಬೇಕಿದೆ. ಕಿಂಗ್ಪಿನ್ಗೆ ಕಾನೂನಿನ ಕೋಳ ತೊಡಿಸುವ ಮೂಲಕ ಈತನಿಂದ ಅಕ್ರಮವಾಗಿ ಪಿಸ್ತೂಲ್ ಪಡೆದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ. ಅಂತಹ ಪಿಸ್ತೂಲ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಕೊಡಗಿನಲ್ಲಿ ಅಕ್ರಮ ಪಿಸ್ತೂಲ್ಗಳ ‘ಸದ್ದು’ ಅಡಗಿಸಲು ಖಾಕಿ ಪಡೆ ಟೊಂಕ ಕಟ್ಟಬೇಕಿದೆ.
ಇಂತಹ ಸಮಾಜಘಾತುಕ ಜಾಲ ಕೊಡಗಿನಲ್ಲಿ ತಲೆ ಎತ್ತದಂತೆ ಪೊಲೀಸರು ತಡೆಯಬೇಕಿದೆ. ಅಕ್ರಮ ಶಸ್ತ್ರಾಸ್ತ್ರದ ಮಾಫಿಯಾಕ್ಕೆ ಈಗಲೇ ಅಂತಿಮ ಮೊಳೆ ಹೊಡೆಯಬೇಕಿದೆ. - ವಿಜಯ್ ಹಾನಗಲ್