ಸಿದ್ದಾಪುರ, ಜು. 23: ಇಂಜಿಲಗೆರೆ ಹಾಗೂ ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು,ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಂಗಳ ವಾರದಂದು ಅರಣ್ಯಕ್ಕೆ ಅಟ್ಟಿಸಿದ್ದರು. ಆದರೆ ಕಾಡಾನೆಗಳ ಹಿಂಡು ಮರಳಿ ಕಾಫಿ ತೋಟಗಳಿಗೆ ಬಂದು ದಾಂದಲೆ ನಡೆಸುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ ಸುತ್ತಮುತ್ತಲಿನ ಇಂಜಿಲಗೆರೆ, ಪುಲಿಯೇರಿ, ಗುಹ್ಯ ಗ್ರಾಮದ ತೋಟಗಳಲ್ಲಿ ಬೀಡು ಬಿಟ್ಟು ಕಾಡಾನೆಗಳು ದಾಂಧಲೆ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಇಂಜಿಲಗೆರೆ ನಿವಾಸಿ ವಿದ್ಯಾಧರ ಎಂಬವರ ಮನೆ ಸುತ್ತ ಸೋಮವಾರದಂದು ಮಧ್ಯರಾತ್ರಿ ಕಾಡಾನೆಗಳು ದಾಂಧಲೆ ನಡೆಸಿ ಕಾಫಿ ಗಿಡಗಳನ್ನು ನಾಶಪಡಿಸಿತು. ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಶಾಲೆಗಳಿಗೆ ತೆರಳುವ ಮಕ್ಕಳು ಭಯದಿಂದಲೇ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಜಿಲಗೆರೆ , ಪುಲಿಯೇರಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ 15 ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆರ್ಆರ್ಟಿ ತಂಡ ಕಾರ್ಯಾಚರಣೆ ನಡೆಸಿ ಸಿದ್ದಾಪುರ ಅಮ್ಮತ್ತಿ ರಸ್ತೆಯ ಮೂಲಕ ಸಮೀಪದ ಅರಣ್ಯಕ್ಕೆ ಓಡಿಸಿದರು. ಆದರೆ ಅರಣ್ಯಕ್ಕೆ ತೆರಳದೆ ಮತ್ತೆ ಕಾಫಿ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭದಲ್ಲಿ ಐದು ಮರಿಯಾನೆಗಳು ಸೇರಿದಂತೆ 15 ಕ್ಕೂ ಹೆಚ್ಚು ಕಾಡಾನೆಗಳಿದ್ದವು ಎಂದು ವೀರಾಜಪೇಟೆ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದರು. ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಸಿದ್ದಾಪುರ ಸುತ್ತಮುತ್ತ ಗ್ರಾಮಗಳಲ್ಲಿ ಸಂಜೆ ಅಘೋಷಿತ ಕಫ್ರ್ಯೂ ಜಾರಿಗೊಳಿಸಿದಂತಾಗಿದೆ. ವಾಹನ ಚಾಲಕರು ಸಂಜೆ ಬಾಡಿಗೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸರಕಾರವು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. -ವಾಸು