ಗೋಣಿಕೊಪ್ಪ ವರದಿ, ಜು. 22: ಸುವರ್ಣ ಮಹೋತ್ಸವ ಹೊಸ್ತಿಲಲ್ಲಿರುವ ಗೋಣಿಕೊಪ್ಪ ಸಂತ ಥಾಮಸ್ ಶಾಲೆಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ಚಿಂತನೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ತಾ. 28 ರಂದು ನಡೆಸಲಾಗುವದು ಎಂದು ಶಾಲೆಯ ಮುಖ್ಯ ಶಿಕ್ಷಕ ರೆವೆರೆಂಡ್ ಜಾರ್ಜ್ ತಿಳಿಸಿದ್ದಾರೆ.
ಹಿರಿಯ ವಿದ್ಯಾರ್ಥಿಗಳ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಶಾಲೆಯ ಅಭಿವೃದ್ಧಿ ನಡೆಸಲು ಸಲುವಾಗಿ ಶಾಲೆಯ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ಪ್ರೋತ್ಸಾಹ ಅಗತ್ಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅತಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿರುವ ಸಂಸ್ಥೆಯಲ್ಲಿ 40 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘ ಸ್ಥಾಪನೆಯಿಂದ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಹಿರಿಯ ವಿದ್ಯಾರ್ಥಿ ಸಂಘದ ಸ್ಥಾಪನೆಯಿಂದ ಹಿರಿಯ ವಿದ್ಯಾರ್ಥಿಗಳ ಸಾಧನೆಗಳ ಪರಿಚಯವಾಗುವದರೊಂದಿಗೆ ಅವರ ಅನುಭವಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲಿದೆ ಎಂದು ಹೇಳಿದರು. ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಶಾಲಾಭಿವೃದ್ಧಿ ಮಂಡಳಿ ಮೊಬೈಲ್ ಸಂಖ್ಯೆ 94495 15432 ಹಾಗೂ 94483 46276 ಸಂಪರ್ಕಿಸಲು ಮನವಿ ಮಾಡಿದರು.
ಗೋಷ್ಠಿಯಲ್ಲಿ ಶಾಲಾಭಿವೃದ್ಧಿ ಸಂಘದ ಸದಸ್ಯರುಗಳಾದ ಅಬ್ದುಲ್ ಸಮ್ಮದ್, ವಿಲ್ಸನ್, ಎ.ಜೆ. ಬಾಬು ಹಾಗೂ ಪಿ.ಕೆ. ಪ್ರವೀಣ್ ಇದ್ದರು.