ಕುಶಾಲನಗರ, ಜು. 22: ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಿವೇಶನ ರಹಿತ ಫಲಾನುಭವಿಗಳಿಗೆ ನೀಡಲು ಉದ್ದೇಶಿಸಲಾಗಿರುವ ನಿವೇಶನ ಪಟ್ಟಿಯಲ್ಲಿ ನೈಜ ಫಲಾನುಭವಿಗಳು ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.

ಕುಶಾಲನಗರದ ಕಾಳಮ್ಮ ಕಾಲೊನಿ ಹಾಗೂ ವಿವೇಕಾನಂದ ಬಡಾವಣೆಯ ನಿವೇಶನ ರಹಿತರು ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯಿತಿಯ ಮುಂಭಾಗ ಪ್ರತಿಭಟನೆ ನಡೆಸಿದರು. ಗುಂಡೂರಾವ್ ಬಡಾವಣೆಯಲ್ಲಿ 150 ಮಂದಿ ನಿವೇಶನ ರಹಿತರಿಗಾಗಿ ಪಟ್ಟಣ ಪಂಚಾಯಿತಿಯ ವತಿಯಿಂದ ಕರೆಯಲಾಗಿದ್ದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭ 312 ಅರ್ಜಿಗಳು ಸಲ್ಲಿಕೆಯಾಗಿದೆ. ಉಳ್ಳವರು ಹಲವರು ಅರ್ಜಿ ಸಲ್ಲಿಸಿದ್ದು ಅಲ್ಲದೆ ನೆರೆ ಜಿಲ್ಲೆಗಳ ಅರ್ಜಿದಾರರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು ಅವುಗಳನ್ನು ರದ್ದುಗೊಳಿಸಬೇಕು.

ಕುಶಾಲನಗರ ಪಟ್ಟಣದ ಕಾಳಮ್ಮ ಕಾಲೋನಿ ಹಾಗೂ ವಿವೇಕಾನಂದ ಬಡಾವಣೆಯಲ್ಲಿ ಸುಮಾರು ಐವತ್ತು ವರ್ಷಕ್ಕೂ ಅಧಿಕ ಕಾಲದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಇದುವರೆಗೂ ಸ್ವಂತ ಮನೆ ಹೊಂದದ ನಿವೇಶನರಹಿತ ಫಲಾನುಭವಿಗಳನ್ನು ಗುರುತಿಸಿ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಅಮೃತರಾಜ್ ಮಾತನಾಡಿ, ನಿವೇಶನ ಹಂಚಿಕೆಯ ವಿಚಾರವಾಗಿ ವಿಶೇಷ ಸಮಿತಿಯೊಂದನ್ನು ರಚಿಸಿ ಆ ಸಮಿತಿಯ ಮೂಲಕ ನಿವೇಶನ ರಹಿತರಿಗೆ ಪ್ರಾಮಾಣಿಕವಾಗಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾಧಿ ಕಾರಿಗಳು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಕಾರ್ಯದರ್ಶಿ ಎಚ್.ಎಂ.ಹೇಮಾ ಮಾತನಾಡಿ, ಈಗಾಗಲೇ ನೈಜ ಫಲಾನುಭವಿಗಳಿಗೆ ನಿವೇಶನ ನೀಡಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ಎರಡು ಬಾರಿ ಮನವಿ ಮಾಡಲಾಗಿದೆ. ನಿವೇಶನ ರಹಿತರ ನಿಯೋಗವು ಬೆಂಗಳೂರಿಗೆ ತೆರಳಿ ವಸತಿ ಸಚಿವರು ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರುಗಳನ್ನು ಭೇಟಿಯಾಗಿ ಮಾಹಿತಿ ನೀಡಲಾಗಿದೆ. ಪಟ್ಟಿಯಲ್ಲಿ ಪಟ್ಟಣದ ಕಾಳಮ್ಮ ಕಾಲೋನಿ ಮತ್ತು ವಿವೇಕಾನಂದ ಬಡಾವಣೆಯ ವಸತಿ ರಹಿತರಿಗೆ ನಿವೇಶನ ನೀಡಲು ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಎನ್ ಗುರುಸ್ವಾಮಿ ಮಾತನಾಡಿ, ಹಲವು ವರ್ಷದಿಂದ ನಿವೇಶನ ರಹಿತರ ಸಮಸ್ಯೆ ಬಗೆಹರಿದಿಲ್ಲ. ಮಾಹಿತಿಯ ಕೊರತೆಯಿಂದ ಅರ್ಜಿ ಸಲ್ಲಿಸಲು ಅಸಾಧ್ಯವಾಗಿರುವ ಕಡುಬಡವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೋರಿದರು.

ನಿವೇಶನ ರಹಿತರು ಮತ್ತು ಗ್ರಾಮಸ್ಥರು ಮನವಿ ಪತ್ರವನ್ನು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಸುಜಯ್‍ಕುಮಾರ್ ಅವರಿಗೆ ನೀಡಿದರು.

ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮಧುಸೂದನ್, ತಾಲೂಕು ಬಿಜೆಪಿ ಯುವ ಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ.ಕೃಷ್ಣಪ್ಪ ಪ್ರಮುಖರಾದ ಕೆ.ಟಿ. ಅಶೋಕ್, ದೇವರಾಜು, ಜಗದೀಶ್, ಶಿವರಾಜು, ಪ್ರಶಾಂತ್ ಸೇರಿದಂತೆ ಸುಮಾರು 150ಕ್ಕೂ ಅಧಿಕ ಮಂದಿ ಇದ್ದರು.