ಶ್ರೀಮಂಗಲ, ಜು. 23: ಕೊಡಗಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ರೈತ ಸಂಘದ ವಿವಿಧ ಜಿಲ್ಲೆಯ ರೈತರ ಬೆಂಬಲದೊಂದಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ವಿರುದ್ಧ ರೈತ ಸಂಘಟನೆಗಳ ಪ್ರಮುಖರು ಭರವಸೆ ನೀಡಿದ್ದಾರೆಂದು ಎಂದು ಕೊಡಗು ಜಿಲ್ಲಾ ರೈತ ಸಂಘದ (ಪ್ರೊ. ಎಂ.ಡಿ. ನಂಜುಂಡ ಸ್ವಾಮಿ ಬಣ) ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಹೇಳಿದರು.
ಹಾವೇರಿಯ ಹುಕ್ಕೇರಿಯಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಗೆ ಜಿಲ್ಲೆಯ ರೈತ ಸಂಘದ ಸದಸ್ಯರೊಂದಿಗೆ ಪಾಲ್ಗೊಂಡ ರೈತರ ತಂಡ ಜಿಲ್ಲೆಗೆ ಹಿಂತಿರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಾಗೂ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ರಾಜ್ಯದ ಎಲ್ಲಾ ಜಿಲ್ಲೆಯ ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಈ ನಿಟ್ಟಿನಲ್ಲಿ ಹಾವೇರಿಗೆ ಜಿಲ್ಲೆಯ ರೈತರು ತೆರಳಿ ಅಲ್ಲಿನ ಹೋರಾಟಕ್ಕೆ ಬೆಂಬಲ ನೀಡಲಾಯಿತು. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಯ ರೈತ ಸಂಘಟನೆಯ ಮುಖಂಡರುಗಳು ಕೊಡಗು ಜಿಲ್ಲೆಯ ರೈತರ ಸಮಸ್ಯೆಗಳಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕೊಡಗಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಅತಿವೃಷ್ಟಿ - ಅನಾವೃಷ್ಟಿಗೆ ಸೂಕ್ತ ಪರಿಹಾರ ದೊರೆಯಬೇಕು, 2018 ರ ಮಹಾಮಳೆ ಹಾಗೂ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬೆಳೆ ನಷ್ಟ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಇದುವರೆಗೆ ಸೂಕ್ತ ನೆರವು ದೊರೆತಿಲ್ಲ ಅವರಿಗೆ ವಿಶೇಷ ನೆರವು ನೀಡಬೇಕು. ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆ ಎಲ್ಲ ರೈತರಿಗೆ ತಲಪಿಲ್ಲ, ಅದನ್ನು ಎಲ್ಲರಿಗೂ ದೊರೆಯುವಂತೆ ಮಾಡಬೇಕು. ಡಾ. ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲೆಯ ರೈತರ ಪರವಾಗಿ ಒತ್ತಾಯಿಸಲಾಗಿದೆ ಎಂದು ಗಣೇಶ್ ತಿಳಿಸಿದರು.
ಜಿಲ್ಲೆಯ ರೈತ ಸಂಘದ ಪ್ರಮುಖರಾದ ಚಂಗುಲಂಡ ರಾಜಪ್ಪ, ಮಚ್ಚಮಾಡ ರಂಜಿ, ಬಾದುಮಂಡ ಮಹೇಶ್, ಚೆಪ್ಪುಡೀರ ಮಹೇಶ್, ಬೊಜ್ಜಂಗಡ ಸುಬ್ರಮಣಿ, ಪೊಯ್ಯಿಲೇಂಗಡ ಗೋಪಾಲ್, ಬಾಚಂಗಡ ಮುದ್ದಪ್ಪ, ಚೊಟ್ಟೆಯಾಂಡಮಾಡ ಮಂಜುದೇವಯ್ಯ, ದೇಕಮಾಡ ವಿನು ರೈತ ಮಹಿಳೆಂiÀiರಾದ ಕರಿನೆರವಂಡ ದೀಪ, ಕಳ್ಳಿಚಂಡ ರೇಖಾ ಅವರು ಸೇರಿದಂತೆ ಸುಮಾರು 60 ರೈತ ಸದಸ್ಯರು ಹಾವೇರಿಯ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸೋಮವಾರ ಜಿಲ್ಲೆಗೆ ವಾಪಸ್ಸಾದರು.