ಮಡಿಕೇರಿ, ಜು. 23: ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಹಾಗೂ ಸೂಕ್ಷ್ಮ ರಸ್ತೆಗಳಿಗೆ ಹಾನಿಯುಂಟಾದರೆ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮರಳು ಚೀಲಗಳನ್ನು ಸಿದ್ಧಪಡಿಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆಯನ್ವಯ ಈ ಕಾರ್ಯ ನಡೆಯುತ್ತಿದ್ದು, ಸುಮಾರು ಒಂದು ಲಕ್ಷ ಮರಳು ಚೀಲಗಳನ್ನು ಸಿದ್ಧ ಮಾಡಲಾಗುತ್ತಿದೆ. ಈ ಚೀಲಗಳನ್ನು ರಸ್ತೆ ಕುಸಿತ ಉಂಟಾದ ಕಡೆಗಳಲ್ಲಿ ಸಾಗಿಸಿ ಅಳವಡಿಸಲು ಸಿದ್ಧತೆ ನಡೆದಿದೆ.

ಈ ನಡುವೆ ಕಳೆದ ರಾತ್ರಿ ಮದೆನಾಡಿನಲ್ಲಿ ಮಳೆಯಿಂದ ರಸ್ತೆ ಬದಿ ಮಣ್ಣು ಕುಸಿದಿದ್ದು, ಸುಮಾರು 150 ಟಿಪ್ಪರ್‍ನಷ್ಟು ಮಣ್ಣನ್ನು ತಕ್ಷಣವೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ಮರಳು ಚೀಲಗಳನ್ನು ತುರ್ತು ಸಂದರ್ಭಕ್ಕಾಗಿ ಶೇಖರಿಸಿಡುವ ಕೆಲಸವೂ ಭರದಿಂದ ಸಾಗಿದೆ ಎಂದು ಗುತ್ತಿಗೆದಾರ ಜಗದೀಶ್ ರೈ ‘ಶಕ್ತಿ’ಗೆ ತಿಳಿಸಿದ್ದಾರೆ.