ಬೆಂಗಳೂರು, ಜು. 22: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಕೂಟ ಸರ್ಕಾರಕ್ಕೆ ವಿಶ್ವಾಸ ಮತಯಾಚನೆಗೆ ಮಂಗಳವಾರ (ಇಂದು) ಸಂಜೆ 6 ಗಂಟೆಗೆ ಅಂತಿಮ ಸಮಯವನ್ನು ನಿಗದಿಪಡಿಸಿ ವಿಧಾನ ಸಭಾಧ್ಯಕ್ಷ ಕೆ.ಆರ್. ರಮೇಶ್‍ಕುಮಾರ್ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.ರಾತ್ರಿ 11.45ರವರೆಗೂ ಕೋಲಾಹಲ, ಗದ್ದಲಗಳೊಂದಿಗೆ, ವಾಗ್ವಾದಗಳು ನಡೆದು ಬಿಜೆಪಿ ಪ್ರಮುಖರ ಒತ್ತಾಯದ ನಡುವೆಯೂ ಸೋಮವಾರ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದ್ದ ವಿಶ್ವಾಸ ಮತಯಾಚನೆಯನ್ನು ಒಂದು ದಿನಕ್ಕೆ ಮುಂಡೂಡಲಾಯಿತು.ಮೈತ್ರಿಕೂಟದ ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯ ಸಚಿವ ಆರ್.ವಿ. ದೇಶಪಾಂಡೆ ಅವರುಗಳು ವಿಶ್ವಾಸ ಮತಯಾಚನ ನಿರ್ಣಯದ ಸಮಯವನ್ನು 6 ಗಂಟೆಗೆ ನಡೆಸಲು ಜವಾಬ್ದಾರಿಕೆ ವಹಿಸಿಕೊಂಡು ಸಭಾಧ್ಯಕ್ಷರಿಗೆ ವಚನವಿತ್ತ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಅಂತಿವಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸದನ ಪ್ರಾರಂಭವಾಗಲಿದ್ದು, ಚರ್ಚೆ - ವಿಚರ್ಚೆಗಳಿಗೆ ಅವಕಾಶ ಕಲ್ಪಿಸುವದಾಗಿಯೂ ಅವರು ಮಾಹಿತಿಯಿತ್ತರು.