ಮಡಿಕೇರಿ, ಜು.23: ಅರಣ್ಯ ಹಕ್ಕು ಕಾಯ್ದೆಯಡಿ ಉಪ ವಿಭಾಗ ಮಟ್ಟದಿಂದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಸಲ್ಲಿಕೆಯಾಗಿದ್ದ 58 ವೈಯಕ್ತಿಕ ಅರ್ಜಿಗಳಲ್ಲಿ 46 ಅರ್ಜಿಗಳಿಗೆ ಅನುಮೋದನೆ ನೀಡಿದ್ದು, 11 ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಹಾಗೂ ಒಂದು ಅರ್ಜಿಯನ್ನು ತಿರಸ್ಕರಿಸಲು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿ ಇರುವ ಅರ್ಜಿಗಳನ್ನು ಆಗಸ್ಟ್, 15 ರೊಳಗೆ ಸರ್ವೇ ಕಾರ್ಯ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಉಪ ವಿಭಾಗ ಮಟ್ಟಕ್ಕೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆಗಳನ್ನು ನಿಯಮ ಬದ್ಧವಾಗಿ ನಡೆಸಿ ಅರ್ಹರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ಅರ್ಜಿಗಳನ್ನು ಉಪ ವಿಭಾಗ ಮಟ್ಟಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತಾ.ಪಂ. ಇಒ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅವರ ಸಹಿ ಇರಬೇಕು.

ಈಗಾಗಲೇ ಅರಣ್ಯ ಹಕ್ಕುಪತ್ರ ನೀಡಿರುವ ಕಡೆಗಳಲ್ಲಿ ಅಂಗನವಾಡಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ ಮತ್ತಿತರ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಅರಣ್ಯ ಹಕ್ಕು ಕಾಯ್ದೆ ಸಂಬಂಧಿಸಿದಂತೆ ಇದುವರೆಗೆ ವೈಯಕ್ತಿಕ ಹಕ್ಕು ಪತ್ರ ನೀಡಲಾಗಿರುವ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸದಸ್ಯರು ಹಾಗೂ ಜಿ.ಪಂ.ಸದಸ್ಯರಾದ ಪಂಕಜ, ಕುಮಾರ, ಮಂಜುಳಾ ಅವರು ಆದಿವಾಸಿ ಜನರು ವಾಸ ಮಾಡಿಕೊಂಡು ಬಂದಿರುವ ಸ್ಥಳಗಳಲ್ಲಿ ಅರಣ್ಯ ಹಕ್ಕು ಪತ್ರ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸೌಲಭ್ಯವನ್ನು ಕಲ್ಪಿಸುವಂತಾಗಬೇಕು ಎಂದು ತಿಳಿಸಿದರು. ದುಬಾರೆ ಅರಣ್ಯ ಪ್ರದೇಶದಲ್ಲಿನ ಅವರೆಗುಂದ, ಬಸವನಹಳ್ಳಿ, ಅಂಚೆತಿಟ್ಟು, ಆಸ್ತಾನ ಮತ್ತಿತರ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ವೈಯಕ್ತಿಕ ಕೊಳವೆ ಬಾವಿಗಳನ್ನು ಕೊರೆಸುವಂತಾಗಬೇಕು ಎಂದು ಸಮಿತಿ ಸದಸ್ಯರು ಹೇಳಿದರು.

ನಾಗರಹೊಳೆಯ ಗಿರಿಜನ ಆಶ್ರಮ ಶಾಲೆಯಲ್ಲಿ 70 ವಿದ್ಯಾರ್ಥಿಗಳಿದ್ದು, 1 ರಿಂದ 7ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಕೊಠಡಿಗಳಿಲ್ಲ. ಸಮರ್ಪಕವಾಗಿ ಕುಡಿಯುವ ನೀರು ದೊರೆಯುತ್ತಿಲ್ಲ. ವಿದ್ಯುತ್ ಸಂಪರ್ಕವಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದು, ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಬೇಕು, ಜೊತೆಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವಂತೆ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವರಾಜು ಮನವಿ ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಯಾವದೇ ಅರಣ್ಯ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ತಿಳಿಸಿದರು. ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ, ತಹಶೀಲ್ದಾರ್ ಮಹೇಶ್, ತಾ.ಪಂ.ಇಒಗಳಾದ ಲಕ್ಷ್ಮೀ, ಸುನಿಲ್ ಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಚಿಕ್ಕಬಸವಯ್ಯ, ಶೇಖರ್, ದೇವರಾಜು, ಸಂಬಂಧಪಟ್ಟ ಗ್ರಾ.ಪಂ.ಗಳ ಪಿಡಿಓಗಳು ಇತರರು ಇದ್ದರು.