ಮಡಿಕೇರಿ, ಜು. 21: ಕೊಡಗು ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನ , ಅಂತ್ಯಕ್ರಿಯೆಗೆ ವಿಶೇಷವಾದ ಗೌರವ ನೀಡುವದರೊಂದಿಗೆ ಇದೊಂದು ಮಹತ್ವದ ವಿಚಾರವಾಗಿ ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಹೇಳಿ - ಕೇಳಿ ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿ ದುರಂತಗಳು ಸಂಭವಿಸಿದಾಗ ಅದು ತ್ವರಿತವಾಗಿ ಎಲ್ಲರಿಗೂ ತಲಪುವದು ದುಸ್ತರವಾಗಿತ್ತು. ಈ ಹಿಂದೆ ಒಂದು ಕುಟುಂಬದಲ್ಲಿ ಸಾವು ಸಂಭವಿಸಿದರೆ ದೂರದಲ್ಲಿರುವ ಅವರ ಬಂಧುಗಳಿಗೆ ಈ ಮಾಹಿತಿಯನ್ನು ನೀಡಲು ಅದು ಭೋರ್ಗರೆಯುವ ಮಳೆಯೇ ಇರಲಿ, ಚಳಿಯೇ ಇರಲಿ, ರಾತ್ರಿಯಾದರೂ ಸರಿ ಸಂದೇಶಕಾರರನ್ನು ಕಳುಹಿಸಿ ಕೊಡಲಾಗುತ್ತಿತ್ತು. ಗುಡ್ಡಗಾಡು ಪ್ರದೇಶವಾದ ಈ ಪ್ರದೇಶದಲ್ಲಿ ವಿದ್ಯುತ್ ಆಗಲಿ, ದೂರವಾಣಿಯಾಗಲಿ ಇರಲಿಲ್ಲ. ಇತ್ತೀಚಿನ ಕೆಲವು ವರ್ಷಗಳ ತನಕವೂ ಇದಕ್ಕೆ ತೀರಾ ಸಮಸ್ಯೆ ಇತ್ತು. ಸ್ಥಳೀಯವಾಗಿ ಇದ್ದ ಪತ್ರಿಕೆಯೊಂದೇ ಈ ಮಾಹಿತಿಗೆ ಅವಕಾಶವಾಗಿತ್ತು. (ಅದೂ ಪತ್ರಿಕೆಯ ಮುದ್ರಣ ಅವಧಿಯ ತನಕ) ಇದು ಹೊರತು ಪಡಿಸಿದಲ್ಲಿ ಟೆಲಿಗ್ರಾಂ, ಟ್ರಂಕಾಲ್ ಅಥವಾ ಸಂದೇಶಕಾರರೇ ಅನಿವಾರ್ಯವಾಗಿತ್ತು.
ಸಾವು ಸಂಭವಿಸಿದಲ್ಲಿ ಅವರ ಸಂಬಂಧಿಕರು ದೂರದಲ್ಲಿದ್ದರೂ, ವಿದೇಶಗಳಲ್ಲೇ ವಾಸಿಸುತ್ತಿದ್ದರೂ ಅವರ ಆಗಮನದ ತನಕ ಕಾಯುವದು ಸಂಕಷ್ಟದ ನಡುವೆಯೂ ಕೊಡಗಿನಲ್ಲಿ ಕಂಡು ಬರುವ ವಿಶೇಷತೆ. ಜಿಲ್ಲೆಯಲ್ಲಿ ಬೇರೆ ಬೇರೆ ಸಮುದಾಯಗಳಿದ್ದು, ಇದಕ್ಕೆ ತಕ್ಕಂತೆ ವಿವಿಧ ಸಂಪ್ರದಾಯಗಳಿವೆ. ಅದರಲ್ಲೂ ಕೊಡವ ಜನಾಂಗದಲ್ಲಿ ನಿಧನದ ಸಂದರ್ಭ ಭಾರೀ ಮಹತ್ವ ನೀಡಲಾಗುತ್ತದೆ. ಬೇರೆಡೆಗಳಿಗಿಂತ ಇಲ್ಲಿ ಕುಟುಂಬ ಪದ್ಧತಿಯು ಇರುವದು ವಿಶೇಷ. ಒಂದು ಕುಟುಂಬದಲ್ಲಿ ಸಾವು ಸಂಭವಿಸಿದರೆ, ಸಾಮಾನ್ಯವಾಗಿ ಹನ್ನೊಂದು ದಿನದಲ್ಲಿ ತಿಥಿಕರ್ಮಾಂತರವನ್ನು ನೆರವೇರಿಸ ಲಾಗುತ್ತದೆ. ಆದರೆ ದುರದೃಷ್ಟವಶಾತ್ ಇದೇ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಿಸಿದಲ್ಲಿ, ನಿಗದಿತ ತಿಥಿಕರ್ಮಾಂತರವನ್ನು ಮುಂದೂಡಲಾಗುತ್ತದೆ; ಎಷ್ಟೇ ಶತ್ರುತ್ವಗಳಿದ್ದರೂ ಸಾವು ಸಂಭವಿಸಿದರೆ, ಅಂತಿಮ ದರ್ಶನ ಪಡೆದೇ ಪಡೆಯುವದು ಕೂಡ ಉಲ್ಲೇಖನೀಯವಾದದ್ದು.
ವಿಶೇಷ ಕಾಳಜಿ
ಇದು ಗುಡ್ಡಗಾಡು ಪ್ರದೇಶ ಇದರೊಂದಿಗೆ ಇಲ್ಲಿ ಸಾವು ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳಿಗೆ ವಿಶೇಷ ಮಹತ್ವ ನೀಡುತ್ತಿರುವದನ್ನು ಮನಗಂಡು ಮಡಿಕೇರಿಯಲ್ಲಿ ಕಾರ್ಯಾಚರಿಸುತ್ತಿರುವ ಆಕಾಶವಾಣಿ ನಿಲಯಕ್ಕೆ ನಿಲಯ ನಿರ್ದೇಶಕರಾಗಿ ಆಗಮಿಸಿದ್ದ ಅಧಿಕಾರಿ ಇಂದಿರಾ ಏಸುಪ್ರಿಯ ಗಜರಾಜ್ (ಈಗ ದಿವಂಗತ) ಅವರು ಕಳೆದ ಹದಿನೈದು ವರ್ಷಗಳ ಹಿಂದೆ ನಿಧನ ಸುದ್ದಿಯನ್ನು ಆಕಾಶವಾಣಿಯ ಮೂಲಕ ಭಿತ್ತರಿಸಲು ದಿಟ್ಟ ಕ್ರಮ ಕೈಗೊಂಡಿದ್ದರು. ಈ ಕಾರಣಕ್ಕಾಗಿ ಆರಂಭದಲ್ಲಿ ಅವರು ಆಕಾಶವಾಣಿಯ ದೆಹಲಿ ನಿರ್ದೇಶನಾಲಯದಿಂದ ಶೋ ಕಾಸ್ ನೋಟೀಸನ್ನೂ ಪಡೆಯಬೇಕಾಗಿ ಬಂದಿತ್ತು. ಆದರೆ ಅವರು ಇದು ಕರ್ತವ್ಯ ಚ್ಯುತಿ ಅಲ್ಲ, ಜನೋಪಯೋಗಿಯಾದ ಕೆಲಸ ಎಂಬದನ್ನು ಮನವರಿಕೆ ಮಾಡುವÀಲ್ಲಿ ಯಶಸ್ಸು ಕಂಡಿದ್ದರು.
ಅಧಿಕೃತಗೊಂಡ ಈ ವಿಚಾರ
ಇಂದಿರಾ ಅವರ ನಂತರ ಇದು ನಿಂತು ಹೋಗಬಾರದು ಎಂಬ ಕಾರಣವನ್ನು ಮುಂದಾಲೋಚಿಸಿ ಇದಕ್ಕೆ ಒಂದು ಸ್ಪಷ್ಟ ನಿರ್ದೇಶನಕ್ಕಾಗಿ ಆಕಾಶವಾಣಿಯ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ, ಸುಬ್ರಾಯ ಸಂಪಾಜೆ ಸೇರಿದಂತೆ ಹಲವರು ಶ್ರಮಿಸಿದ್ದರು. ಇದಕ್ಕಾಗಿ ಕೊಡವ ಸಮುದಾಯದ ಪ್ರಮುಖರು, ಸಮಾಜಗಳು ಜಿಲ್ಲೆಯ ಇನ್ನಿತರ ಪ್ರಮುಖರ ಮೂಲಕ ಶಿಫಾರಸ್ಸು ಪತ್ರ, ಮನವಿಗಳನ್ನು ಸಿದ್ಧಪಡಿಸಲಾಯಿತು.
ಇದೇ ಸಂದರ್ಭದಲ್ಲಿ...
ಇಂತಹ ಪ್ರಯತ್ನದ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯೆಯಾಗಿದ್ದು, ಪ್ರಸಾರ ಭಾರತೀಯ ಸದಸ್ಯೆಯೂ ಆಗಿದ್ದ ಐಚೆಟ್ಟಿರ ಪ್ರೇಮಾಕಾರ್ಯಪ್ಪ ಅವರ ಕುಟುಂಬದಲ್ಲಿ ಒಂದೆರಡು ದಿನಗಳ ಅಂತರದಲ್ಲಿ ಎರಡು ಸಾವು ಸಂಭವಿಸಿ ಓರ್ವರ ತಿಥಿಕರ್ಮಾಂತರ ಮುಂದೂಡಲ್ಪಟ್ಟಿತ್ತಲ್ಲದೆ, ಮತ್ತೊಂದು ಸಾವಿನ ವಿಚಾರ ಅರಿತು (ಸಮಯವಲ್ಲದ ಸಮಯದಲ್ಲಿ) ಬಂದ ಜನರ ಸಂಖ್ಯೆಯನ್ನು ಸ್ವತಃ ಗಮನಿಸಿ ಪ್ರೇಮಾ ಕಾರ್ಯಪ್ಪ ಅವರೇ ಅಚ್ಚರಿಗೊಂಡಿದ್ದರಂತೆ.
ಈ ಸಂದರ್ಭ ನಾಪೋಕ್ಲುವಿನ ಡಾ. ಸಣ್ಣುವಂಡ ಕಾವೇರಪ್ಪ ಅವರು ಪ್ರೇಮಾ ಕಾರ್ಯಪ್ಪ ಅವರ ಕುಟುಂಬದ ಆಪ್ತರಾಗಿದ್ದರಿಂದ ಅವರನ್ನು ಬಳಸಿಕೊಂಡು ಇನ್ನಿತರ ಎಲ್ಲಾ ಪ್ರಮುಖರ ಮನವಿ, ಶಿಫಾರಸ್ಸಿನಂತೆ ದೆಹಲಿ ಮಟ್ಟದಲ್ಲಿ ವ್ಯವಹರಿಸಿದ ಪರಿಣಾಮ ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಮಡಿಕೇರಿ ಆಕಾಶವಾಣಿಯ ಮೂಲಕ ನಿಧನದ ಸುದ್ದಿಯನ್ನು ಭಿತ್ತರಿಸಲು ನಿರ್ದೇಶನಾಲಯವು 2014ರ ಮೇ 1 ರಂದು ಅಧಿಕೃತ ಸುತ್ತೋಲೆಯನ್ನು ಹೊರಡಿಸಿ ಅನುಮತಿ ನೀಡಿರುವದು ಆಕಾಶವಾಣಿಯಲ್ಲಿ ನಿಧನ ಸುದ್ದಿ ಭಿತ್ತರವಾಗುತ್ತಿರುವದರ ಹಿನ್ನೆಲೆಯಾಗಿದೆ.
ಪ್ರಸ್ತುತ ಅಡಚಣೆ
ಇದು ಅಧಿಕೃತಗೊಂಡ ಬಳಿಕ ಇಲ್ಲಿಯವರೆಗೆ ಇದರಲ್ಲಿ ಯಾವದೇ ಸಮಸ್ಯೆಗಳು ಇರಲಿಲ್ಲ. ಆಯಾ ಸಂದರ್ಭದಂತೆ ಸುದ್ದಿ ಭಿತ್ತರವಾಗುತ್ತಿತ್ತು. ಇದೀಗ ಬಂದಿರುವ ಹಿರಿಯ ಅಧಿಕಾರಿ ವಿಜಯ್ ಅಂಗಡಿ ಅವರು ಈ ಸುದ್ದಿ ಪ್ರಸಾರಕ್ಕೆ ಹಿಂದಿನ ರೀತಿಯಲ್ಲಿ ಅವಕಾಶ ನೀಡುತ್ತಿಲ್ಲವೆಂಬುದು ಪ್ರಸ್ತುತ ಚರ್ಚಾ ವಿಷಯವಾಗಿದೆ. ಈ ತನಕ ರಾತ್ರಿ, ಬೆಳಿಗ್ಗೆ ಅಥವಾ ದಿನದ ಯಾವದೇ ಸಂದರ್ಭದಲ್ಲಿ ಈ ಮಾಹಿತಿಯನ್ನು ಸಂದರ್ಭಾನುಸಾರ ಭಿತ್ತರಿಸಲಾಗುತಿತ್ತು. ಆದರೆ ಪ್ರಸ್ತುತ ಒಂದೇ ಸಮಯದಲ್ಲಿ ಇದನ್ನು ಪ್ರಚಾರ ಮಾಡಬೇಕು, ಕೊಡವ ಭಾಷೆ ಬಳಸಬಾರದು, ಮನೆ ಹೆಸರು ಬೇಡ, ಎಂಬಿತ್ಯಾದಿ ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆನ್ನಲಾಗಿದೆ.
ಜಿಲ್ಲೆಯಲ್ಲಿ ಕೊಡವರು, ಗೌಡ ಜನಾಂಗದವರು, ಇತರ ಭಾಷಿಕ ಜನಾಂಗದವರು ಇದ್ದಾರೆ, ಕೆಲವು ಮನೆ ಹೆಸರು ಒಂದೇ ರೀತಿಯಲ್ಲಿದೆ, ಇದರಿಂದ ಕೊಡವ ಭಾಷೆ ಬಳಸಿದಲ್ಲಿ ಅದು ಅವರವರ ಸಂಬಂಧಿಕರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂಬದು ಒಂದು ವಿಚಾರವಾದರೆ, ಜಿಲ್ಲೆಯಲ್ಲಿ ದೂರವಾಣಿ - ಮೊಬೈಲ್ ಸಮಸ್ಯೆಗಳು, ವಿದ್ಯುತ್ ಸಮಸ್ಯೆ ಇರುವದರಿಂದ, ಸಾಮಾಜಿಕ ಜಾಲತಾಣಗಳ ಮೂಲಕವೂ ಸುದ್ದಿ ತಲಪುವದು ಕಷ್ಟ, ಸ್ಥಳೀಯ ಪತ್ರಿಕೆಯಲ್ಲಿ ಜನರಿಗೆ ಉಪಯೋಗವಾಗುವಂತೆ ಸುದ್ದಿ ನೀಡಲಾಗುತ್ತಿದೆಯಾದರೂ ಸಾವು ಸಂಭವಿಸುವ ಸಮಯವನ್ನು ಯಾರೂ ಹೇಳಲಾಗದು, ಆದರೆ ಇದು ಯಾವದರನ್ನೂ ಈ ಅಧಿಕಾರಿ ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನವಿದೆ.
ಮಡಿಕೇರಿ ಕೊಡವ ಸಮಾಜದ ಪ್ರಮುಖರು ಆಕಾಶವಾಣಿಗೆ ಖುದ್ದಾಗಿ ತೆರಳಿ ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಲು ಮುಂದಾಗಿದ್ದಾರೆ. ಈ ಸಂದರ್ಭ ವಿಜಯ್ ಅಂಗಡಿ ಅವರು ಕಚೇರಿಯಲ್ಲಿ ಇರದ ಕಾರಣ ಕೇಂದ್ರದ ಮುಖ್ಯಸ್ಥ ಉಣ್ಣಿಕೃಷ್ಣನ್ ಅವರಿಗೆÉ ಲಿಖಿತ ಮನವಿ ಸಲ್ಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಆಕ್ಷೇಪಗಳು ವ್ಯಕ್ತಗೊಳ್ಳುತ್ತಿವೆ. ಇದನ್ನು ಪರಿಗಣಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಲಾಗಿದೆ.